Karkala: ಮಾಳ ಕೋಟೆ ಬಸದಿಯಲ್ಲಿ 5 ಪ್ರಾಚೀನ ಜಿನ ಶಾಸನಗಳ ಪತ್ತೆ

Spread the love

Karkala:ಮಾಳ ಕೋಟೆ ಬಸದಿಯಲ್ಲಿ 5 ಪ್ರಾಚೀನ ಜಿನ ಶಾಸನ ಪತ್ತೆ; 14ನೇ ಶತಮಾನದ ಪ್ರತಿಮೆಗೂ ಸಾಕ್ಷ್ಯ

Ancient Jain inscriptions discovered at Kote Basadi in Mala, Karkala.
Ancient Jain inscriptions discovered at Kote Basadi in Mala, Karkala.

Karkala: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಕೋಟೆ ಬಸದಿಯಲ್ಲಿ ಐದು ಅಪರೂಪದ ಪ್ರಾಚೀನ ಜಿನ ಶಾಸನಗಳು ಪತ್ತೆಯಾಗಿವೆ. ಬಸದಿಯ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಮೂರ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿದ್ದು, ಈ ವೇಳೆ ಶಾಸನಗಳು ಸಂಶೋಧಕರ ಗಮನಕ್ಕೆ ಬಂದಿವೆ.

ಮಾಳದ ಕೋಟೆ ಬಸದಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಸೇರಿದ್ದು, ಇಲ್ಲಿ ಆದಿನಾಥ, ನೇಮಿನಾಥ, ಪಾರ್ಶ್ವನಾಥ, ಚಂದ್ರನಾಥ ತೀರ್ಥಂಕರರು ಹಾಗೂ ಪದ್ಮಾವತಿ ದೇವಿಯ ಸನ್ನಿಧಿಗಳಿವೆ. ಸ್ಥಳೀಯ ಜೈನ ಸಮುದಾಯ ಹಾಗೂ ಹಲವು ಗುತ್ತು ಮನೆತನಗಳಿಂದ ಈ ಸನ್ನಿಧಿಗಳನ್ನು ಹಿಂದಿನಿಂದಲೂ ಆರಾಧಿಸಲಾಗುತ್ತಿದೆ.

ಖ್ಯಾತ ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ನೀಡಿದ ಮಾಹಿತಿಯ ಆಧಾರದ ಮೇಲೆ ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ನೇತೃತ್ವದ ತಂಡ ಬಸದಿಗೆ ಭೇಟಿ ನೀಡಿತ್ತು. ಈ ವೇಳೆ ಜಿನ ಪ್ರತಿಮೆಗಳು ಮತ್ತು ಶ್ರುತಸ್ಕಂದದ ಪೀಠಭಾಗದಲ್ಲಿ ಶಾಸನಗಳು ಪತ್ತೆಯಾಗಿವೆ.

ನಂತರ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ಮನವಿಯ ಮೇರೆಗೆ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನಗಳ ಸಮಗ್ರ ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ಪ್ರಕಾರ ಒಟ್ಟು ಐದು ಶಾಸನಗಳು ಲಭ್ಯವಾಗಿದ್ದು, ಅವುಗಳಲ್ಲಿ ಮೂರು ಶಿಲಾ ಜಿನ ಪ್ರತಿಮೆಗಳ ಮೇಲೆ ಹಾಗೂ ಎರಡು ಲೋಹದ ವಸ್ತುಗಳ ಮೇಲೆ ಕೆತ್ತಲಾಗಿದೆ.

Karkala: 14ನೇ ಶತಮಾನದ ಪಾರ್ಶ್ವನಾಥ ಪ್ರತಿಮೆ

ಪಾರ್ಶ್ವನಾಥ ತೀರ್ಥಂಕರರ ಕಾಯೋತ್ಸರ್ಗ ಭಂಗಿಯಲ್ಲಿರುವ ಶಿಲಾ ಪ್ರತಿಮೆಯ ಪೀಠಭಾಗದಲ್ಲಿ ಸ್ವಸ್ತಿಕ ಚಿಹ್ನೆಯೊಂದಿಗೆ ಆರಂಭವಾಗುವ ಶಾಸನವೊಂದು ಪತ್ತೆಯಾಗಿದೆ. ಈ ಶಾಸನದ ಪ್ರಕಾರ ‘ಪಾಯಂಣ’ ಎಂಬ ವ್ಯಕ್ತಿ ಪಾರ್ಶ್ವನಾಥರ ಮೂರ್ತಿಯನ್ನು ಮಾಡಿಸಿದ್ದಾರೆ. ಲಿಪಿಯ ಲಕ್ಷಣಗಳನ್ನು ಆಧರಿಸಿ ಈ ಪ್ರತಿಮೆ ಮತ್ತು ಶಾಸನವು 14ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ.

ಇನ್ನೊಂದು ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಹಿಂಭಾಗದಲ್ಲಿ ಎಂಟು ಸಾಲಿನ ಶಾಸನ ಕಂಡುಬಂದಿದೆ. ಇದರಲ್ಲಿ ಪ್ರತಿಷ್ಠಾಪನೆ ಹಾಗೂ ಮೂರ್ತಿಯ ದೈನಂದಿನ ಪೂಜೆ ಅಥವಾ ನೈವೇದ್ಯಕ್ಕಾಗಿ ಅಕ್ಕಿಯನ್ನು ಸಮರ್ಪಿಸಿದ ಕುರಿತು ಮಾಹಿತಿ ದಾಖಲಾಗಿದೆ.

ಕಂಚಿನ ಗಣಧರ ಪಾದದ ಶಾಸನ

ಕೋಟೆ ಬಸದಿಯಲ್ಲಿ ಕಂಚಿನ ಗಣಧರ ಪಾದವೂ ಪತ್ತೆಯಾಗಿದ್ದು, ಅದರ ಪೀಠದ ಮೇಲೆ ಮೂರು ಸಾಲಿನ ಶಾಸನವಿದೆ. ಮಾಳದ ಕೋಟೆ ಬಸದಿಗೆ ಹೆಗಡೆಯ ಮಗ ‘ವಿಞ’ ಎಂಬವರು ಗಣಧರ ಪಾದವನ್ನು ಮಾಡಿಸಿಕೊಟ್ಟಿರುವುದನ್ನು ಈ ಶಾಸನ ದಾಖಲಿಸುತ್ತದೆ. ಲಿಪಿಯ ಆಧಾರದ ಮೇಲೆ ಇದು 18ರಿಂದ 19ನೇ ಶತಮಾನಕ್ಕೆ ಸೇರಿದದ್ದು ಎಂದು ಅಂದಾಜಿಸಲಾಗಿದೆ.

ಅದೇ ರೀತಿ ಕಂಚಿನ ಶ್ರುತಸ್ಕಂದದ ಪೀಠದ ಹಿಂಭಾಗದಲ್ಲಿ ನಾಲ್ಕು ಸಾಲಿನ ಶಾಸನವಿದ್ದು, ತೆಲ್ಲಾರ್ ಸಮೀಪದ ದೇಮ ನಾಯಕರು ವ್ರತದ ಉದ್ಯಾಪನೆ ನೆರವೇರಿಸಿ ಮಾಳದ ಬಸದಿಗೆ ಶ್ರುತವನ್ನು ಸಮರ್ಪಿಸಿದ ವಿಚಾರವನ್ನು ಇದು ದಾಖಲಿಸಿದೆ.

ಇನ್ನೊಂದು ಪಾರ್ಶ್ವನಾಥ ತೀರ್ಥಂಕರರ ಅಮೃತಶಿಲೆಯ ಪ್ರತಿಮೆಯ ಪೀಠಭಾಗದಲ್ಲಿ ಎರಡು ಸಾಲಿನ ದೇವನಾಗರಿ ಲಿಪಿಯ ಶಾಸನವಿದೆ. ಈ ಶಾಸನವು ಪ್ರತಿಮೆಯ ಪ್ರತಿಷ್ಠಾಪನೆ 17ನೇ ಶತಮಾನದಲ್ಲಿ ನಡೆದಿರುವುದನ್ನು ಸೂಚಿಸುತ್ತದೆ.

14-15ನೇ ಶತಮಾನಕ್ಕೆ ಸೇರಿದ ಬಸದಿ?

ಕೋಟೆ ಬಸದಿಯಲ್ಲಿ ದೊರೆತ ಶಾಸನಗಳನ್ನು ಕೆರ್ವಾಶೆಯ ವರ್ಧಮಾನ ಬಸದಿಯ ಶಾಸನಗಳೊಂದಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ. ಈ ತುಲನಾತ್ಮಕ ಅಧ್ಯಯನದ ಆಧಾರದ ಮೇಲೆ ಕೋಟೆ ಬಸದಿಯ ಮೂಲ ಕಾಲಘಟ್ಟ 14-15ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮಹತ್ವದ ಕ್ಷೇತ್ರಕಾರ್ಯದಲ್ಲಿ ಕೋಟೆ ಬಸದಿಯ ಶ್ರೀ ಚಂದ್ರನಾಥ ಇಂದ್ರರು, ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸಾಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಅವರು ಸಹಕರಿಸಿದ್ದಾರೆ.

Leave a Comment

Scroll to Top