Karkala: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಆಸ್ಪತ್ರೆಗೆ ದಾಖಲು

Karkala: ಕಾರ್ಕಳ-ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ಸಮೀಪ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಕಾರು ಹಾನಿಗೊಳಗಾಗಿದೆ. ಡಿಕ್ಕಿಯ ರಭಸದಿಂದ ವಾಹನದಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ರಮಾನಾಥ ರೈ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಅಪಘಾತದ ಬಳಿಕ ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗಿದೆ.
ರಮಾನಾಥ ರೈ ಅವರ ವೈಯಕ್ತಿಕ ಸಹಾಯಕ ಡೆನ್ಜೆಲ್ ಅವರ ಬಲಗಾಲಿಗೆ ಮುರಿತವಾಗಿದ್ದು, ವಾಹನದಲ್ಲಿದ್ದ ಇತರರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ರಮಾನಾಥ ರೈ ಸೇರಿದಂತೆ ಗಾಯಗೊಂಡವರನ್ನು ಆರಂಭದಲ್ಲಿ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಬಳಿಕ ಹೆಚ್ಚಿನ ತಪಾಸಣೆ ಹಾಗೂ ವೈದ್ಯಕೀಯ ನಿಗಾ ದೃಷ್ಟಿಯಿಂದ ರಮಾನಾಥ ರೈ ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
ಅಪಘಾತ ಸಂಭವಿಸಿದ ಸಾಣೂರು ಗ್ರಾಮದ ಸಮೀಪದ ಕಾರ್ಕಳ-ಮೂಡುಬಿದಿರೆ ರಸ್ತೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
Read this:Kallugudde: ಕಲ್ಲುಗುಡ್ಡೆಯಲ್ಲಿ ಶ್ರೀ ವಿದ್ಯಾಗಣಪತಿ ಸುವರ್ಣ ಮಹೋತ್ಸವ ಸಂಪನ್ನ