Rashmika Mandanna: 400 ಕುಟುಂಬಗಳಿಗೆ ಒಂದು ವರ್ಷದವರೆಗೆ ದಿನಸಿ ನೆರವು ನೀಡಲು ಮುಂದಾದ ರಶ್ಮಿಕಾ ಮಂದಣ್ಣ

Rashmika Mandanna:ನಟಿ ರಶ್ಮಿಕಾ ಮಂದಣ್ಣ ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಆರ್ಥಿಕವಾಗಿ ನೆರವಿನ ಅಗತ್ಯವಿರುವ 400 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಒದಗಿಸುವ ಯೋಜನೆಯನ್ನು ಅವರು ಘೋಷಿಸಿದ್ದಾರೆ.
ಈ ಮೂಲಕ ಕುಟುಂಬಗಳ ದಿನನಿತ್ಯದ ಖರ್ಚಿಗೆ ನೆರವಾಗುವುದರ ಜೊತೆಗೆ, ಅವರ ಭವಿಷ್ಯದ ಉಳಿತಾಯಕ್ಕೂ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.
‘ಅನ್ನಪೂರ್ಣ’ ಯೋಜನೆಯ ಮೂಲಕ ನೆರವು
ರಶ್ಮಿಕಾ ಮಂದಣ್ಣ ಅವರು ‘ಅನ್ನಪೂರ್ಣ’ ಯೋಜನೆಯಡಿ ಈ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. 400 ಕುಟುಂಬಗಳಿಗೆ ಏಕಕಾಲದಲ್ಲಿ ಮೂರು ತಿಂಗಳವರೆಗೆ ದಿನಸಿ ಸಾಮಗ್ರಿಗಳನ್ನು ಒದಗಿಸಲಿದ್ದಾರೆ.
ಇದೇ ರೀತಿಯ ನೆರವನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಕುಟುಂಬಗಳಿಗೆ ದಿನಸಿ ಖರೀದಿಸಲು ವ್ಯಯವಾಗುವ ಹಣ ಉಳಿತಾಯವಾಗಲಿದ್ದು, ಅದನ್ನು ಭವಿಷ್ಯದ ಅಗತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಬೇಕು ಎಂಬುದು ಈ ಯೋಜನೆಯ ಆಶಯವಾಗಿದೆ.
‘ರಣಬಾಲಿ’ ಚಿತ್ರದ ಪಾತ್ರದಿಂದ ಪ್ರೇರಣೆ
ಸದ್ಯ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ ಅವರೊಂದಿಗೆ ಅಭಿನಯಿಸಿರುವ ‘ರಣಬಾಲಿ’ ಚಿತ್ರದ ಬಿಡುಗಡೆಗೆ ಸಿದ್ಧರಾಗಿದ್ದಾರೆ.
ಈ ಚಿತ್ರದಲ್ಲಿ ಅವರು ನಿರ್ವಹಿಸಿರುವ ಜಯಮ್ಮ ಪಾತ್ರವು ತಮ್ಮ ವ್ಯಕ್ತಿತ್ವದ ಮೇಲೂ ಪ್ರಭಾವ ಬೀರಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ತಾವು ಈ ಹಿಂದೆ ಇಂತಹ ಸಮಾಜಮುಖಿ ಕೆಲಸಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದೆ ಮಾಡುತ್ತಿದ್ದೆವು. ಆದರೆ, ತಮ್ಮ ಕಾರ್ಯದಿಂದ ಪ್ರೇರಣೆ ಪಡೆದು ಇತರರೂ ತಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುವಂತಾಗಲಿ ಎಂಬ ಉದ್ದೇಶದಿಂದ ಈ ಬಾರಿ ವಿಷಯವನ್ನು ಬಹಿರಂಗಪಡಿಸಿರುವುದಾಗಿ ತಿಳಿಸಿದ್ದಾರೆ.
ಸಹಾಯ ಮಾಡಲು ದೊಡ್ಡ ಮೊತ್ತವೇ ಬೇಕಿಲ್ಲ. ಸಣ್ಣ ಪ್ರಯತ್ನವೂ ಮತ್ತೊಬ್ಬರ ಜೀವನದಲ್ಲಿ ಬದಲಾವಣೆ ತರಬಹುದು ಎಂಬ ಸಂದೇಶವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.