Bengaluru: ದಾಖಲೆಯಿಲ್ಲದ ಗ್ರಾಮಠಾಣಾ ಆಸ್ತಿಗಳಿಗೂ ಇ-ಸ್ವತ್ತು: ನವೆಂಬರ್ 2 ರಿಂದ ಅರ್ಜಿ ಸಲ್ಲಿಕೆ ಆರಂಭ

Bengaluru: ಗ್ರಾಮೀಣ ಭಾಗದ ಆಸ್ತಿ ಮಾಲೀಕರ ಬಹುದಿನಗಳ ಸಮಸ್ಯೆಗೆ ಸರ್ಕಾರ ಮುಕ್ತಿ ಹಾಡಿದ್ದು, ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಹಾಗೂ ದಾಖಲೆಗಳಿಲ್ಲದ ಆಸ್ತಿಗಳಿಗೂ ಇ-ಸ್ವತ್ತು ನೀಡಲು ನಿರ್ಧರಿಸಿದೆ.
ನವೆಂಬರ್ 2 ರಿಂದ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳಿಗೆ ತಿದ್ದುಪಡಿ ತಂದು, ಇ-ಸ್ವತ್ತು 2 ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದ್ದು, ಇದರಿಂದ ರಾಜ್ಯದ ಸುಮಾರು 25 ರಿಂದ 30 ಲಕ್ಷ ಗ್ರಾಮೀಣ ಆಸ್ತಿ ಮಾಲೀಕರಿಗೆ ಶೀಘ್ರದಲ್ಲೇ ಇ-ಸ್ವತ್ತು ದೊರೆಯಲಿದೆ.
ಪ್ರಮುಖ ನಿಯಮಗಳು ಮತ್ತು ಅರ್ಹತೆಗಳು
• ವಿದ್ಯುತ್ ಬಿಲ್ ಆಧಾರ: ತಲೆಮಾರುಗಳಿಂದ ದಾಖಲೆ ಇಲ್ಲದೆ ವಾಸಿಸುತ್ತಿರುವ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದೆ.
2025ರ ಏಪ್ರಿಲ್ 7ರ ಪೂರ್ವದ ವಿದ್ಯುತ್ ಬಿಲ್ ಹಾಗೂ ಸ್ಥಳ ಪರಿಶೀಲನೆಯ ಆಧಾರದ ಮೇಲೆ ಇ-ಸ್ವತ್ತು ನೀಡಲಾಗುತ್ತದೆ.
• ಆಸ್ತಿಯ ವಿಸ್ತೀರ್ಣ ಮಿತಿ: ಈ ಯೋಜನೆಯು ಹಿತ್ತಲು ಮತ್ತು ಮನೆಯಂಗಳ ಸೇರಿದಂತೆ ಒಟ್ಟು 4,000 ಚದರಡಿಯೊಳಗಿರುವ ನಿವೇಶನ ಅಥವಾ ಆಸ್ತಿಗಳಿಗೆ ಮಾತ್ರ ಅನ್ವಯಿಸಲಿದೆ.
ಇದರಿಂದ ಗ್ರಾಮೀಣ ಭಾಗದ ಶೇ. 90ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ 11ಎ/11ಬಿ ಸಿಗಲಿದೆ.
• ಸುಳ್ಳು ಮಾಹಿತಿ ನೀಡಿದರೆ ರದ್ದು: ಕಾನೂನು ತೊಡಕುಗಳನ್ನು ತಡೆಗಟ್ಟಲು ಆಸ್ತಿ ಮಾಲೀಕರಿಂದ ಮುಚ್ಚಳಿಕೆ ಪತ್ರ (ಪ್ರಮಾಣಪತ್ರ) ಪಡೆಯಲಾಗುತ್ತದೆ. ಒಂದು ವೇಳೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದು, ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಇ-ಸ್ವತ್ತು ಪ್ರಮಾಣಪತ್ರವನ್ನು ರದ್ದುಪಡಿಸಲಾಗುತ್ತದೆ.
ಇತರೆ ಸರಳೀಕೃತ ಕ್ರಮಗಳು
• ಹಕ್ಕುಪತ್ರ ಕಳೆದುಹೋಗಿದ್ದರೆ: ವಸತಿ ಯೋಜನೆಯಡಿ ಸರ್ಕಾರದಿಂದ ಹಕ್ಕುಪತ್ರ ಪಡೆದು, ಪ್ರಸ್ತುತ ಅದು ಲಭ್ಯವಿಲ್ಲದಿದ್ದರೆ, ಹಕ್ಕುಪತ್ರ ವಿತರಿಸಿದ ಪ್ರಾಧಿಕಾರದಿಂದ ಧೃಢೀಕರಣ ಪತ್ರ ಪಡೆದು ಇ-ಸ್ವತ್ತು ಪಡೆಯಬಹುದು.
• ಕೃಷಿ ಭೂಮಿ ಕಟ್ಟಡಗಳಿಗೆ ‘ಬಿ ಖಾತೆ’: ನಮೂನೆ-11 ಬಿ ಪಡೆಯುವ ವಿಧಾನವನ್ನು ಸರಳೀಕರಿಸಲಾಗಿದ್ದು, ಯಾವುದೇ ನೋಂದಾಯಿತ ಪತ್ರವಿಲ್ಲದೆ ಕೃಷಿ ಜಮೀನಿನಲ್ಲಿ ವಾಸ ಅಥವಾ ಕೃಷಿ ಉದ್ದೇಶಕ್ಕೆ ನಿರ್ಮಿಸಿರುವ ಕಟ್ಟಡಗಳಿಗೂ ಇ-ಸ್ವತ್ತು ನಮೂನೆ 11 ಬಿ ಪಡೆಯಲು ಅವಕಾಶ ನೀಡಲಾಗಿದೆ.
• ಅರಣ್ಯವಾಸಿಗಳಿಗೆ ಅನುಕೂಲ: ಪಾರಂಪರಿಕವಾಗಿ ಅರಣ್ಯ ಭಾಗದಲ್ಲಿ ವಾಸಿಸುತ್ತಿದ್ದು, ಅರಣ್ಯ ಹಕ್ಕು ಕಾಯಿದೆಯಡಿ ಹಕ್ಕುಪತ್ರ ಪಡೆದಿರುವವರ ಆಸ್ತಿಗಳಿಗೂ ನಮೂನೆ ಪಡೆಯಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಭಿಯಾನದ ವೇಳಾಪಟ್ಟಿ
ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಈ ಹಿಂದೆ ಅಕ್ಟೋಬರ್ 2 ರಂದು ಆರಂಭವಾಗಬೇಕಿದ್ದ ಈ ಅಭಿಯಾನ ತಡವಾಗಿತ್ತು.
ಈಗ ರಾಜ್ಯೋತ್ಸವದ ಕೊಡುಗೆಯಾಗಿ ನವೆಂಬರ್ 2 ರಿಂದ ಅರ್ಜಿ ಸ್ವೀಕಾರ ಹಾಗೂ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ ಮೊದಲ ವಾರದಿಂದ ಇ-ಸ್ವತ್ತು ಪ್ರಮಾಣ ಪತ್ರಗಳ ವಿತರಣೆ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದ್ದಾರೆ.