Life Values:ಕತ್ತಲಿನಿಂದ ಬೆಳಕಿನೆಡೆಗೆ

Spread the love

Life Values: ಅತಿಯಾದ ಅವಲಂಬನೆ: ಒಂದು ಜೀವಿಯಾಗಿ ಜನಿಸಿದ ಮೇಲೆ ಒಬ್ಬರನೊಬ್ಬರು ಅವಲಂಬಿಸಿಯೇ ಬದುಕಬೇಕು. ಕೆಲವು ಬಾರಿ ಪ್ರತ್ಯಕ್ಷವಾಗಿ ಮತ್ತೆ ಕೆಲವು ಬಾರಿ ಪರೋಕ್ಷವಾಗಿ.

 

Life Values
Life Values

Life Values:

 

ಆದರೆ ಹೆಚ್ಚಿನ ಅವಲಂಬನೆ ಶೋಭೆಯನ್ನುಂಟುಮಾಡದು. ಆಹಾರಕ್ಕಾಗಿ ಸಸ್ಯವನ್ನು ಅವಲಂಬಿಸಿವುದು. ಪೂರಕವಾದ ಅವಲಂಬನೆಯೇ ಹೊರತು ಯಾರದ್ದೋ ಹಣವನ್ನು ಅಥವಾ ಇನ್ನೇನನ್ನೋ ಅವಲಂಬಿಸುವುದಲ್ಲ.

ಮನುಷ್ಯ ಎನ್ನುವವನು ಎಷ್ಟು ಅವಲಂಬಿತ ಜೀವಿಯೂ ಅಷ್ಟೇ ಸ್ವತಂತ್ರ ಜೀವಿ ಕೂಡ ಹೌದು. ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲವನು. ಹಾಗೂ ಉದಾಸೀನದಿಂದ ಬೇರೆಯವರ ಕಾಲನ್ನು ಕೂಡ ಹಿಡಿಯಬಲ್ಲವನು.

ಪ್ರತೀ ಜೀವಿಗೂ ತಮ್ಮ ಆಹಾರವನ್ನು ತಾವೇ ಹೊಂದಿಸಿಕೊಳ್ಳುವಷ್ಟು ಶಕ್ತಿ ಇರುತ್ತದೆ. ಹಾಗೂ ಮನುಷ್ಯನಿಗೆ ಆಹಾರವಷ್ಟೇ ಅಲ್ಲದೆ ಸುಖ ಜೀವನ ನಡೆಸಲು ಬೇಕಾದ ಪ್ರತಿಯೊಂದನ್ನು ಪಡೆದುಕೊಳ್ಳುವ ಸಾಮರ್ಥ್ಯವಿದೆ.

ಆದರೂ ಕೂಡ ಆತ ಎಷ್ಟೋ ಬಾರಿ ಇನ್ನೊಬ್ಬರ ಮೇಲೆ ಅವಲಂಬಿತನಾಗಿಬಿಡುತ್ತಾನೆ.

ಮನುಷ್ಯನ ಅವಲಂಬನೆ ಅವನಿಗೆ ನೇರವಾಗಿ ಪರಿಣಮಿಸುತ್ತದೆ ಎಂಬುದನ್ನು ಆತ ಮರೆತೇ ಬಿಡುತ್ತಾನೆ. ನಾವು ಯಾವಾಗ ನಮ್ಮ ಕೆಲಸಗಳಿಗೆ ಇನ್ನೊಬ್ಬರನ್ನು ಅವಲಂಬಿಸುತ್ತೇವೆಯೋ ಅವರು ಆ ಸಮಯದ ಬಳಕೆ ಮಾಡಿಕೊಳ್ಳುತ್ತಾರೆ.

ಹಾಗೂ ನಮ್ಮ ಕೆಲಸ ಮಾಡಿಕೊಡುವುದಕ್ಕಿಂತ ಮೇಲಾಗಿ ನಮ್ಮಿಂದ ಉಂಟಾಗುವ ಲಾಭದ ಕಡೆಗೆ ಗಮನ ಕೊಡುತ್ತಾರೆ.

ಇದರಿಂದ ನಮ್ಮ ಕೆಲಸವೂ ಇಲ್ಲ. ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ಉಂಟಾಗುತ್ತದೆ. ಕೆಲವರು ಹಣಕ್ಕಾಗಿ ಮೋಸ ಮಾಡಿದರೆ ಕೆಲವರು ತಮ್ಮ ಅವಶ್ಯಕತೆಗಾಗಿ ಬಳಸಿಕೊಳ್ಳುತ್ತಾರೆ.

ಅದರ ಪ್ರತಿಯಾಗಿ ನಮ್ಮ ಕೆಲಸಗಳನ್ನು ಕೇಳಿದಾಗ ಅದರಿಂದ ಜಾರಿಕೊಳ್ಳಲು ಮಾರ್ಗ ಹುಡುಕುತ್ತಾರೆ.

ಮನುಷ್ಯ ಸಂಘ ಜೀವಿ ಹೌದು. ಜೊತೆಗೆ ಬುದ್ಧಿ ಜೀವಿಯೂ ಹೌದಲ್ಲವೇ? ಆತನಿಗೆ ತನ್ನ ಬದುಕಿನ ಸಮಸ್ಯೆಗಳನ್ನು ತಾನೇ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲವೇ? ತನ್ನಲ್ಲೇ ಬದುಕುವ ಸಾಮರ್ಥ್ಯವಿರುವಾಗ ಇನ್ನೊಬ್ಬರ ಹಂಗೇಕೆ?

ನಮ್ಮನ್ನು ನಾವು ಹೀಗೆ ಪ್ರಶ್ನಿಸುತ್ತಾ ಹೋದರೆ ಹಲವುಂಟು ಪ್ರಶ್ನೆಗಳು.
ಹಿಂದೆಲ್ಲ ಜೀತದಾಳುಗಳು ಒಡೆಯನನ್ನು ಅವಲಂಬಿಸಿದಕ್ಕೆ ಜೀವಮಾನವಿಡೀ ತಮ್ಮ ಶಕ್ತಿ-ಸಾಮರ್ಥ್ಯವನ್ನು ಅವರಿಗಾಗಿಯೇ ಮೀಸಲಿಡಬೇಕಿತ್ತು. ನಯಾಪೈಸೆಯು ತಮಗಾಗಿ ದೊರೆಯುತ್ತಿರಲಿಲ್ಲ.

ನಾವು ಯಾರನ್ನು ನಮ್ಮ ಕೆಲಸಕ್ಕಾಗಿ ಅವಲಂಬಿಸುತ್ತೇವೆಯೋ ಅವರು ನಮ್ಮ ಕೆಲಸಕ್ಕಿಂತ ಹೆಚ್ಚಾಗಿ ಅದೇ ಸಮಯದಿಂದ ನಮ್ಮಿಂದ ಎಷ್ಟಾಗುತ್ತದೆಯೋ ಅಷ್ಟು ಎಂಬಂತೆ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ.

ಅಲ್ಲಿಗೆ ಅವರ ಸಹಾಯದ ಋಣವೆಲ್ಲಿಂದ ಬಂತು? ನಾವು ಪ್ರತಿಯಾಗಿ ಕೆಲಸ ಮಾಡಿಕೊಟ್ಟಿಲ್ಲವೇ? ಆದರೂ ಕೂಡ ಋಣದ ಮಾತನಾಡುವುದು ನಿಲ್ಲುವುದಿಲ್ಲವೆಂಬುದೇ ವಿಪರ್ಯಾಸಕರ ಸಂಗತಿ.

ಕಷ್ಟವಾದರೂ ಎದೆಗುಂದದೆ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. ತೀರಾ ಅನಿವಾರ್ಯವಾದಾಗ ಇನ್ನೊಬ್ಬರ ಮೊರೆ ಹೋದಲ್ಲಿ ತಪ್ಪಿಲ್ಲ ಆದರೆ ನಾವು ನಮ್ಮ ಬುದ್ಧಿವಂತಿಕೆಯಲ್ಲಿದ್ದಾಗ ಯಾರೂ ಕೂಡ ಮೋಸ ಮಾಡಲು ಸಾಧ್ಯವಿಲ್ಲ.

ಗೆದ್ದರೆ ಅಥವಾ ಸೋತರೆ ಮುಂದಿನ ಪ್ರಯತ್ನಕ್ಕೆ ನಾವು ತಯಾರಾದಂತೆ ಮತ್ತು ಅಲ್ಲಿ ನಮ್ಮ ಅನುಭವವೇ ನಮ್ಮನ್ನು ಗೆಲುವಿನತ್ತ ಕರೆದೊಯ್ಯುತ್ತದೆ.

Life Values:ಋಣದ ಭಾರ:

ಯಾವ ಮನುಷ್ಯನೂ ಕೂಡ ತನ್ನ ಹುಟ್ಟು. ತಾನು ಹುಟ್ಟಬೇಕಾದಂತಹ ಸ್ಥಳ, ಜಾತಿ, ಕುಟುಂಬ, ಧರ್ಮ, ದೇಶ ಯಾವುದರ ಕುರಿತಾಗಿಯೂ ಕೇಳಿಕೊಂಡು ಬಂದಿರುವುದಿಲ್ಲ.

ಎಲ್ಲವೂ ದೈವ ನಿಶ್ಚಿತ. ಮತ್ತೂ ಬಿಟ್ಟುಹೋಗುವುದನ್ನು ಕೂಡ ಭಗವಂತನೇ ನಿರ್ಧರಿಸಿರುತ್ತಾನೆ.

ಈ ಎಲ್ಲದರ ಮಧ್ಯೆ ನಮ್ಮ ಜೀವನ ಜನನದಿಂದ ಹಿಡಿದು ಮರಣದ ತನಕ ನಾವು ಬದುಕಿದ್ದೇವೆ. ಎಂಬುದಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಬಹಳ  ಮುಖ್ಯವಾಗಿರುತ್ತದೆ.

ಹುಟ್ಟಿದಾಗಿನಿಂದ ಕೊನೆಯ ತನಕ ಬೇಡ ಎಂದರೂ ಕೂಡ ಅನೇಕರ ಮೇಲೆ ಅವಲಂಬಿಸಿ ಬದುಕಬೇಕಾಗುತ್ತದೆ.

ಸಹಾಯಕ್ಕಾಗಿ ಬೇಡಬೇಕಾಗುತ್ತದೆ ಮತ್ತು ನೀಡಬೇಕಾಗುತ್ತದೆ ಕೂಡ. ಆದರೆ ಇದರ ನಮ್ಮ ಮೇಲೆ ಒಂದಷ್ಟು ಋಣವಿರುತ್ತದೆ. ಎಂಬುದನ್ನು ನಾವು ಮರೆತೇ ಬಿಡುತ್ತೇವೆ.

ಬೇರೆಲ್ಲ ದೇಶಗಳನ್ನು ನೋಡಿದಾಗ ಆಚಾರ-ವಿಚಾರಗಳಿಂದ ಹಿಡಿದು ಎಲ್ಲದರಲ್ಲೂ ಸಮೃದ್ಧವಾಗಿರುವ ಹಾಗೂ ಎಲ್ಲರನ್ನು ಆಕರ್ಷಿಸುವ ನಾಡು ನಮ್ಮದು. ವಿವಿಧತೆಯಲ್ಲಿ ಏಕತೆಯನ್ನು ಕಂಡದ್ದು ನಮ್ಮ ದೇಶ ಮಾತ್ರವೇ!!

ಹಾಗೂ ಇಂತಹ ನಾಡಿದಲ್ಲಿ ಕೇವಲ ಹುಟ್ಟಿದಕ್ಕಾಗಿಯೇ ಋಣ ತೀರಿಸಬೇಕು. ಹೀಗಿರುವಾಗ ಜೀವಮಾನ ಕಳೆಯುವುದಕ್ಕೆ ಎಷ್ಟೊಂದು ಋಣ ನಮ್ಮ ಮೇಲಿರಬಹುದು?

ದೇಶದ ಸಂವಿಧಾನವೇ ಹೇಳುವಂತೆ ನಮಗೆ ಕೇವಲ ಅದು ಹಕ್ಕುಗಳನ್ನು ನೀಡಿಲ್ಲ. ಕರ್ತವ್ಯಗಳನ್ನು ಕೂಡ ನೀಡಿದೆ. ಹಾಗೂ ಅವುಗಳನ್ನು ನಿಭಾಯಿಸುವುದು ಪ್ರಜೆಗಳಾದ ನಾವು ಮೊದಲು ಮಾಡಬೇಕಾದ ಕೆಲಸ! ಆದರೆ ನಮ್ಮ ಹಕ್ಕಿಗಾಗಿ ಪ್ರಶ್ನಿಸೋ ನಾವುಗಳು ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದೇವೆ?

ನಮ್ಮ ಕರ್ತವ್ಯಗಳ ಬಗ್ಗೆ ಎಂದಾದರೂ ನಾವು ಪ್ರಶ್ನಿಸಿದ್ದೇವೆಯೇ? ಹಕ್ಕಿಗಾಗಿ ಕೇಳಿದಷ್ಟು ಧರಣಿ ಕೂತಷ್ಟು ಕರ್ತವ್ಯಕ್ಕಾಗಿ ಪ್ರತಿಭಟನೆ ಮಾಡಿದ್ದೇವೆಯೇ? ಇಲ್ಲವಲ್ಲ… ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಹೋದರೆ ನಮಗೆ ನಮ್ಮ ಮೇಲೆ ಮುಜುಗರ ಉಂಟಾಗಬಹುದು.

ಆದರೆ ಖಂಡಿತವಾಗಿಯೂ ನಾವೇನಾಗಿದ್ದೇವೆ? ನಾವೇನು ಮಾಡಬೇಕು? ಕರ್ತವ್ಯಗಳ ಬಳಕೆಯನ್ನು ಹೇಗೆ ಮಾಡಬೇಕು? ಎಂಬುದಂತೂ ತಿಳಿಯುತ್ತದೆ.
ಪ್ರಜೆಗಳು ಹೀಗೆ ಇರಬೇಕೆಂದು ಕಟ್ಟುಪಾಡುಗಳು ಎಷ್ಟಿವೆಯೋ ಅಷ್ಟೇ ಮಟ್ಟಿಗೆ ಸ್ವಾತಂತ್ರ್ಯವನ್ನು ಕೊಟ್ಟಿರುವುದೇ ನಮ್ಮದೇ ದೇಶ.

ಎಲ್ಲವನ್ನೂ ಸಮಾನತೆಯ ಪ್ರತೀಕವಾಗಿರುವ ನಾಡಲ್ಲಿ ಎಲ್ಲದರಲ್ಲೂ ಸಮಾನತೆ ಕೇಳುವ ನಾವುಗಳು, ಸ್ವಾತಂತ್ರ್ಯ ವೀರರಿಗೆ ಸಮನಾಗಿ ದೇಶಕ್ಕಾಗಿ ಪ್ರಾಣ ಬಿಡಲು ಸಿದ್ಧರಿದ್ದೇವೆಯೇ?

ದೇಶಕ್ಕಾಗಿ ಕುಟುಂಬ ಹಾಗೂ ಸುಖವನ್ನು ತ್ಯಾಗ ಮಾಡುತ್ತೇವೆಯೇ? ದೇಶಕ್ಕಾಗಿ ಚಿರ ಯವ್ವನವನ್ನು ಬಲಿಕೊಡುತ್ತೇವೆಯೇ? ಕೊಡುತ್ತೇವೆ ಎಂದಾದರೆ ಹಕ್ಕುಗಳನ್ನು ಕೇಳುವ ಹಕ್ಕಿದೆ ನಮಗೆ ಎನ್ನಬಹುದು…

ಅದರ ಹೊರತಾಗಿ ದೇಶದ ಸಮಸ್ಯೆಗೆ ನಾವ್ಯಾಕೆ ಕೊರಗಬೇಕು. ಅಡಳಿತವಿದೆ ಸರಿಪಡಿಸಲು ಎಂದುಕೊಂಡರೆ ನಾವು ಮೂರ್ಖರು.

ಕೆಲವು ಬಾರಿ ಸಣ್ಣ-ಸಣ್ಣ ಕಿಗೂ ಕೂಡ ದೊಡ್ಡ ಮಾರ್ಧನಿಯಾಗಿ ಪರಿಣಮಿಸುತ್ತದೆ. ದೇಶಕ್ಕಾಗಿ ದೇಶದ ಹಿತವಾಗಿ ದುಡಿದವನು ಎಂದಿಗೂ ಸೋತಿಲ್ಲ. ಸೋಲಿನಲ್ಲೆ ಗೆಲುವನ್ನು ಉಂಡಿರುತ್ತಾನೆ.

ಭಾರತದ ಸನಾತನತೆಯನ್ನು ಪ್ರಶ್ನಿಸುವಷ್ಟು ಅನೇಕರು ಬೆಳೆದುನಿಂತಿದ್ದಾರೆ ದೇಶದಲ್ಲಿ. ಆದರೆ ತಾವು ಇಂತಹ ಸಂಸ್ಕೃತಿಭರಿತ ನಾಡಲ್ಲಿ ಹುಟ್ಟಿದ್ದೇ ತಮ್ಮ ಪುಣ್ಯ ಎಂಬುದನ್ನು ಮರೆತಂತಿದೆ!! ನಾವಾದರೂ ಪೂರ್ತಿಯಂತೂ ಸಾಧ್ಯವಿಲ್ಲ.

ಕೈಲಾದಷ್ಟು ತಾಯಿ ಭಾರತಿಯ ಸೇವೆ ಮಾಡಿ, ಋಣ ತೀರಿಸುವ ಪ್ರಯತ್ನಕ್ಕೆ ಕೈ ಹಾಕಬೇಕಾಗಿದೆ!!

ಬೆಳಕೆಂಬ ಗುರಿಗೆ ಕತ್ತಲೆಂಬ ದಾರಿ:

 

ಆರೋಹ ತಮಸೋ ಜ್ಯೋತಿಃ” ಅರ್ಥಾತ್ ಕತ್ತಲಿನಿಂದ ಬೆಳಕಿನೆಡೆಗೆ. ಹುಟ್ಟುತ್ತಲೇ ಎಲ್ಲರೂ ಎಲ್ಲವನ್ನೂ ಪಡೆದುಕೊಂಡು ಬಂದಿರುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ತಮಗೆ ಬೇಕಾದುದನ್ನು ಗಳಿಸುವ ಹಕ್ಕಂತೂ ಖಂಡಿತವಾಗಿಯೂ ಇದೆ.

ಬಡವನಾಗಿ ಹುಟ್ಟಿದ್ದೇವೆಂದರೆ ಬಡವರಾಗಿಯೇ ಸಾಯಬೇಕೆಂದೇನಿಲ್ಲ ಎನ್ನುವಂತೆ!! ಬೆಳಕಿಗಿಂತಲೂ ಕತ್ತಲು ಅತ್ಯುತ್ತಮ ಶಿಕ್ಷಕ.

ಜೀವನದ ಮೌಲ್ಯಗಳನ್ನು ಕಲಿಸಿದ ನಂತರವೇ ಅದು ಬೆಳಕಿನ ಪರಿಚಯ ಮಾಡಿಸುವುದು. ಮೊದಲೇ ಬೆಳಕು ಸಿಕ್ಕಿತೆಂದರೆ ಕತ್ತಲೆಯ ಅರಿವಿರುವುದಿಲ್ಲ. ಮತ್ತು ಬೆಳಕಿನ ಮಹತ್ವವೂ ತಿಳಿದಿರುವುದಿಲ್ಲ.

ಯಾವುದಾದರೂ ಕೂಡ ಪರಿಶ್ರಮದಿಂದ ದೊರೆತರೇನೇ ಅದಕ್ಕೆ ಬೆಲೆ ಜಾಸ್ತಿ. ಮತ್ತು ಅದರಿಂದ ದೊರೆಯುವ ನೆಮ್ಮದಿಯೂ ಜಾಸ್ತಿ. ಸೋಲುಗಳು ಸಹಜ, ಅವು ನಮ್ಮನ್ನು ತಿದ್ದಲು ಎದುರಾಗುತ್ತವೆಯೇ ಹೊರತು ತುಳಿಯಲಲ್ಲ.

ಹಾಗೂ ಅವುಗಳನ್ನು ಸ್ವೀಕರಿಸಿ ಮುನ್ನಡೆಯುವ ಸ್ವಭಾವ ನಮ್ಮದಾಗಿರಬೇಕು. ಆಗ ಮಾತ್ರವೇ ಜೀವಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಎಷ್ಟೋ ಜನರು ಈ ಕಾರಣಕ್ಕಾಗಿಯೇ ಆತ್ಮಹತ್ಯೆಗೆ ಶರಣಾದವರು ಇದ್ದಾರೆ.

ಸೋಲನ್ನು ಸ್ವೀಕರಿಸಬೇಕೆ ಹೊರತು ಅದಕ್ಕೆ ಶರಣಾಗಿಬಿಡುವುದಲ್ಲ. ಸ್ವೀಕರಿಸಿ ಅದಕ್ಕೆ ಸೆಡ್ಡು ಹೊಡೆದು ನಿಲ್ಲಬೇಕು. ಆಗಲೇ ಗೆಲುವು ನಿಮ್ಮ ಬಳಿಗೆ ತಾನಾಗಿಯೇ ಧಾವಿಸ ಬರುವುದು.

ಅದೃಷ್ಟವನ್ನು ನಾವಾಗಿಯೇ ಹುಡುಕುವುದಕ್ಕಿಂತ ಅದೇ ನಮ್ಮನ್ನು ಹುಡುಕಿ ಬಂದರೆ ಸ್ವರ್ಗಸುಖ ಸಿಕ್ಕಿದಂತೆಯೇ ಅಲ್ಲವೇ? ಬಡತನದ ಅರಿವಿದ್ದವರು ಮಾತ್ರವೇ ಉಳಿತಾಯದ ಕಡೆಗೇ ಮನಸು ಮಾಡುತ್ತಾರೆ.

ಹಾಗೂ ಮುಂದಿನ ಕತ್ತಲೆಯ ದಿನಗಳಿಗಾಗಿಯೇ ಅವರು ಉಳಿಸ ಹೊರಟಿರುತ್ತಾರೆ, ಆದರೆ ಈ ಅವರ ಶಕ್ತಿ ಮೀರಿದ ಪ್ರಯತ್ನ ವ್ಯರ್ಥವಾಗದೆ ಮುಂದೆ ಅದೇ ಹಣದಲ್ಲಿ ಅವರು ಬೆಳಕಿನಲ್ಲಿ ಜೀವಿಸಲು ಸಹಾಯವಾಗುತ್ತದೆ.

ಒಂದೊಮ್ಮೆ ಜಗತ್ತಿನ ಎಲ್ಲಾ ರಾಷ್ಟ್ರಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದುದು ನಮಗೆ ತಿಳಿದೇ ಇದೆ. ಭಾರತದ ದೀರ್ಘವಾದ ಪ್ರಯತ್ನ ಮತ್ತು ಅಭಿವೃದ್ಧಿಗಳಿಂದಾಗಿ ಇಂದು ಇಡಿಯ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ.

ನಮ್ಮ ಸ್ನೇಹ ಬಯಸುತ್ತಿದೆ ಎಂದರೆ ಕತ್ತಲೆಯ ಹಾದಿಯಲ್ಲಿ ನಡೆದುದಕ್ಕೂ ಸಾರ್ಥಕವೆನಿಸುತ್ತಿದೆ. “ತಮಸೋಮ ಜ್ಯೋತಿರ್ಗಮಯ” ಈಗಿನಿಂದಲ್ಲ, ಹಿಂದಿನಿಂದಲೂ ನಮ್ಮ ಸಂಸ್ಕೃತಿ ಹೇಳುತ್ತಿರುವುದು ಕತ್ತಲಿನಿಂದ ಬೆಳಕಿನೆಡೆಗೆ ಸಾಗು ಎಂದೇ.

ಅರ್ಥಾತ್ ಕತ್ತಲಿನ ಪರಿಚಯವಾದ ನಂತರವೇ ಬೆಳಕು ದೊರೆಯುವುದು ಅಗತ್ಯವಾಗಿದೆ.
ಆದರೆ ಕೇವಲ ನಾವು ಮಾತ್ರವೇ ಬೆಳಕನ್ನು ತಲುಪುವುದಕ್ಕಿಂತ ನಮ್ಮೊಡನೆ ಇನ್ನೂ ಅನೇಕರನ್ನು ಕರೆದೊಯ್ಯುವುದು ಸೂಕ್ತವೇನೋ!! ನಾವು ಕಲಿತದ್ದು.

ಕಲಿಯುವಾಗ ಮಾಡಿದ ತಪ್ಪುಗಳು ಇವುಗಳ ಕುರಿತಾಗಿ ಇನ್ಯಾರಿಗೋ ತಿಳಿಸಿದಾಗ ಅವರು ಮೊದಲೇ ಎಚ್ಚೆತ್ತುಕೊಳ್ಳಲು ಸಾಧ್ಯವಾಗುತ್ತದೆ.

ಮತ್ತು ಬೇಗ ಗುರಿ ತಲುಪಲು ಕೂಡ. ಇದರಿಂದಾಗಿ ಪರೋಪಕಾರ ಪುಣ್ಯ ಮತ್ತು ಆತ್ಮತೃಪ್ತಿಯು ಕೂಡ ನಮ್ಮದಾಗುತ್ತದೆ. ನಾನು ಎನ್ನುವುದಕ್ಕಿಂತ ನಾವೆನ್ನುವುದು ಅತೀ ಸೂಕ್ತವಾಗಿದೆ.

ದೊರೆತಾಗ ಕತ್ತಲನ್ನು ಚೆನ್ನಾಗಿ ಬಳಸಿಕೊ ನಂತರ ಆ ಕತ್ತಲು ಮತ್ತೆಂದು ದೊರೆಯದು. ದೊರೆಯುವುದು ಕೇವಲ ಬೆಳಕು ಮಾತ್ರವೇ!!

ಗಳಿಸಿದ್ದು, ಕಲಿತಿದ್ದು:

 

ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದೊಂದು ಗುರಿ ಇದ್ದೇ ಇರುತ್ತದೆ. ನಮಗೆ ಶಾಶ್ವತವಾಗಿ ಏನನ್ನೋ ಪಡೆಯುವ ಹಂಬಲವಾದರೆ. ಪ್ರಾಣಿ-ಪಕ್ಷಿಗಳಿಗೆ ಅಂದಿನ ಹಾಗೂ ಆ ಹೊತ್ತಿನ ಆಹಾರ ಮತ್ತು ಇರಲು ಪುಟ್ಟ ಗೂಡಿದ್ದರೆ ಸಾಕು! ಎಲ್ಲರೂ ಗುರಿ ತಲುಪಲೆಬೇಕೆಂದಿಲ್ಲ.

 ಕೆಲವರು ಗುರಿಯಿಂದ ಹಿಂದೆಯೇ ಉಳಿದು ಅದರಲ್ಲೇ ತೃಪ್ತಿ ಕಂಡುಕೊಂಡುಬಿಟ್ಟರೆ. ಇನ್ನೂ ಕೆಲವರು ಗುರಿಯಿಂದಲೂ ಮುಂದಕ್ಕೆ ಸಾಗಿ ತಮ್ಮನ್ನು ತಾವು ಇನ್ನೂ ಎತ್ತರಕ್ಕೆ ಕರೆದೊಯ್ಯುತ್ತಾರೆ. ಇನ್ನೂ ಎಷ್ಟೋ ಜನರಿಗೆ ಏನೂ ಕೂಡ ಯಾವುದೂ ಕೂಡ ಸಿಗುವುದೇ ಇಲ್ಲ.
ನಾವು ಗುರಿಯ ಹಿಂದೆ ಸಾಗುತ್ತಿದ್ದೇವೆ ಹೌದು. ಆದರೆ ಯಾವ ರೀತಿಯಾಗಿ ಸಾಗುತ್ತಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗೂ ಅದರ ಆಧಾರದ ಮೇಲೆಯೇ ನಮಗೆ ದೊರೆಯುವ ಫಲ ನಿರ್ಧರಿತವಾಗುತ್ತದೆ.

ಫಲವೆಂದರೆ ಕೇವಲ ಕಡೆಯಲ್ಲಿ ದೊರೆಯುವ ಫಲವಷ್ಟೇ ಅಲ್ಲ. ದಾರಿಯುದ್ದಕ್ಕೂ ನಾವು ಕಲಿಯುವ ಪಾಠಗಳಾಗಿರುತ್ತವೆ. ಅವುಗಳು ನಮ್ಮ ಜೀವನದ ಮೇಲೆ ಬೀರಿದ ಪರಿಣಾಮಗಳಾಗಿರುತ್ತವೆ.

ಹೆಚ್ಚಾಗಿ ಇಂತಹ ದಾರಿಯುದ್ದಕ್ಕೂ ನಾವು ಸೋಲುಗಳನ್ನೇ ಕಾಣುತ್ತೇವೆ. ಅವುಗಳನ್ನು ಎದುರಿಸಲಾರದೆ ಸೋತವ ಮುಂದೆಂದೂ ಎದ್ದು ನಿಲ್ಲಲಾರ.

ಹಾಗೂ ಅವನು ಆ ಸಾಲುಗಳನ್ನು ಗೆದ್ದರೆ ಗುರಿಯನ್ನು ತಲುಪದಿದ್ದರೂ ಕೂಡ ಆತ ಗೆದ್ದಂತಯೇ ಲೆಕ್ಕವಾಗಿರುತ್ತದೆ.

ಯಾವುದೋ ಕೋರ್ಸನ್ನು ಓದಿದವ ಇನ್ನಾವುದೋ ಕೆಲಸ ಹಿಡಿಯುತ್ತಾನೆ. ಏನೋ ಆಗಬೇಕೆಂದು ಬಯಸಿದವ ಇನ್ನಾವುದೋ ದಾರಿಯಲ್ಲಿ ನಡೆಯುತ್ತಾನೆ. ಮತ್ತು ಇನ್ನೇನೋ ಆಗುತ್ತಾನೆ.

ಕೆಲವೊಮ್ಮೆ ಬೇಕಾದ ದಾರಿಯಲ್ಲಿಯೇ ಸಾಗುತ್ತಿದ್ದರೂ ಅನಿರೀಕ್ಷಿತವಾಗಿ ಬೇರೇನೂ ದೊರೆತು ಬಿಡುತ್ತದೆ.

ಕೆಲವರು ಅದನ್ನ ಕೈಬಿಟ್ಟರೆ ಮತ್ತೂ ಕೆಲವರನ್ನು ಆದೇ ಕೈ ಹಿಡಿಯುತ್ತದೆ. ಹೌದು! ಮರುಭೂಮಿಯನ್ನು ದಾಟುವುದೇ ನಮ್ಮ ಗುರಿಯಾದರೂ ಕೂಡ. ದಾರಿಯ ಮಧ್ಯೆ ಸಿಗುವ ಓಯಸಿಸ್ ನಮ್ಮ ದಾಹ ತೀರಿಸಿ ಜೀವ ಉಳಿಸುತ್ತದೆ.

ಹೀಗಿರುವಾಗ ಅದು ಕೂಡ ಒಂದು ರೀತಿಯಾಗಿ ಗೆಲುವೇ ಅಲ್ಲವೇ. ಇಲ್ಲವಾದಲ್ಲಿ ಗುರಿ ತಲುಪುವಷ್ಟು ದೂರ ಜೀವ ಉಳಿಯುತ್ತಿರಲಿಲ್ಲ.
ಕಲಿಕೆ ಎಂಬುದು ನಿರಂತರವಾಗಿರುವಂತಹದ್ದು. ಯಾವುದನ್ನು ಪೂರ್ತಿಯಾಗಿ ಕಲಿಯಲು ಸಾಧ್ಯವಾಗದು.

ಹಾಗಾಗಿ ಯಾರನ್ನೂ ಕೂಡ ನಾವು ಪೂರ್ಣ ಜ್ಞಾನಿಗಳು ಎನ್ನುವುದು ತಪ್ಪಾಗುತ್ತದೆ. ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಕೆಲವರು ಅಥವಾ ಹಲವರಿಗಿಂತ ಪ್ರಾವೀಣ್ಯರಾಗಿರುತ್ತಾರೆ ಅಷ್ಟೇ!

ಯಾವುದೇ ಪಠ್ಯಪುಸ್ತಕ ಕೂಡ ಆ ಸಮಯಕ್ಕೆ ಬೇಕಾದಂತಹ ಎಲ್ಲಾ ಜ್ಞಾನವನ್ನೂ ನೀಡಲು ಸಾಧ್ಯವಿಲ್ಲ.

ಯಾಕೆಂದರೆ ಅದು ಕೂಡ ಆಗಾಗ ಬದಲಾಗುವಂತಹದ್ದು. ಹಾಗಾದರೆ ಪ್ರಯತ್ನಗಳ ರಾಶಿ ಇದ್ದೂ ಕೂಡ ಮನುಷ್ಯನಿಗೆ ಸೋಲುಂಟಾಗಲು ಕಾರಣವೇನೆಂದು ನಾವು ಕೇಳುವುದಾದರೆ, ಎಲ್ಲವೂ ಸುಲಭವಾಗಿ ಸಿಕ್ಕಾಗ ಅದು ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ.

ಅಷ್ಟೇ ಅಲ್ಲ ಉಂಟಾದ ಒಂದಷ್ಟು ಸೋಲುಗಳು ಮುಂದೆ ಗುರಿ ತಲುಪಿದಾಗ ಅಲ್ಲಿ ತನ್ನನ್ನು ತಾನು ಹೇಗೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿಕೊಡುತ್ತದೆ.
ಎಷ್ಟೆಲ್ಲ ಪ್ರಯತ್ನಪೂರಗಳ ನಂತರ ಕಡೆಯಲ್ಲಿ ಏನೋ ಸಿಗುತ್ತದೆ ಅಥವಾ ಸಿಗುವುದಿಲ್ಲ. ಆದರೆ ಅಲ್ಲಿಯ ತನಕದ ಪ್ರಯಾಣದಲ್ಲಿ ಖಂಡಿತಾ ಎಲ್ಲವೂ ಸಿಗುತ್ತದೆ: ಆತ್ಮತೃಪ್ತಿ, ಧೈರ್ಯ, ವಿಶ್ವಾಸ, ಛಲ, ಗೆಲುವಿನ ಹಸಿವು, ಕನಸು ಇನ್ನಿತ್ಯಾದಿ.

ಹೌದು! ಬದುಕಿದ್ದೇವೆ ಸಾಧಿಸಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದೆವು? ಹೇಗೆ ಸಾಧಿಸಿದೆವು? ನಾವು ನಡೆದ ದಾರಿ ಹೇಗಿತ್ತು? ಮತ್ತು ಹೇಗೆ ನಡೆದು ಬಂದೆವು? ಎನ್ನುವುದೇ ಬಹಳ ಮುಖ್ಯವಾಗುತ್ತದೆ.

ಇದರಿಂದ ನಾವು ಕಲಿಯುವ ಅಥವಾ ಗಳಿಸುವ ಅಂಶಗಳು ಒಂದಷ್ಟಾದರೇ ನಮ್ಮಿಂದ ಸ್ಫೂರ್ತಿ ಹೊಂದುವವರಿಗೆ ನಾವು ನೀಡೋ ಕೊಡುಗೆಯಾಗಿರುತ್ತದೆ ಅದು…

ಇನ್ನಷ್ಟು ಮಾಹಿತಿಗಾಗಿ: Lessons by Krishna 

ಇದನ್ನು ಓದಿ: Best indoor plants for home

Leave a Comment

Scroll to Top