Bengaluru: KPSC ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಬೆಂಗಳೂರಿನ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Bengaluru: ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಗಂಗ್ವಾರ್ ಅವರ ನಿವಾಸಕ್ಕೆ ED ಅಧಿಕಾರಿಗಳು ಹಾಗೂ CRPF ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಅಧಿಕಾರಿಗಳಿಗೆ ಆರಂಭದಲ್ಲಿ ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಕೀ ಮೇಕರ್‌ರನ್ನು ಸ್ಥಳಕ್ಕೆ ಕರೆಸಿಕೊಂಡ ಅಧಿಕಾರಿಗಳು ಬೀಗ ತೆಗೆಸಿ ಮನೆಯ ಬಾಗಿಲು ತೆರೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಸತತ ಪ್ರಯತ್ನದ ಬಳಿಕ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.
ಯಾವುದೇ ಆರೋಪಗಳಿಗೆ ಅವಕಾಶವಾಗದಂತೆ ಮುಂಜಾಗ್ರತಾ ಕ್ರಮವಾಗಿ ED ಅಧಿಕಾರಿಗಳು ಹಾಗೂ CRPF ಸಿಬ್ಬಂದಿ ಮನೆಯೊಳಗೆ ಪ್ರವೇಶಿಸುವ ಮುನ್ನ ಸಂಪೂರ್ಣ ತಪಾಸಣೆಗೆ ಒಳಗಾಗಿದ್ದಾರೆ. ಈ ಪ್ರಕ್ರಿಯೆಯನ್ನೂ ಅಧಿಕಾರಿಗಳು ವಿಡಿಯೋ ಮಾಡಿಕೊಂಡಿದ್ದಾರೆ.
ಅಧಿಕಾರಿಗಳು ಕೀ ಮೇಕರ್ ಮೂಲಕ ಮನೆಯ ಬೀಗ ತೆರೆಯಿಸಿದ ಪ್ರಕ್ರಿಯೆ ಸೇರಿದಂತೆ ಮನೆಯೊಳಗೆ ಪ್ರವೇಶಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ದಾಖಲಿಸಿಕೊಂಡಿದ್ದಾರೆ. ಬಳಿಕ ಮನೆಯೊಳಗೆ ತೆರಳಿ ದಾಖಲೆಗಳು ಸೇರಿದಂತೆ ಅಗತ್ಯ ವಸ್ತುಗಳ ಪರಿಶೀಲನೆ ಆರಂಭಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು
KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಗಂಗ್ವಾರ್ ಅವರು ಈ ಹಿಂದೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು.
ಇತ್ತೀಚೆಗೆ ಗಂಗ್ವಾರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವಿಚಾರವೂ ಚರ್ಚೆಗೆ ಬಂದಿತ್ತು. ಆದರೆ ಅವರು ತಮ್ಮ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದರು.
ಇದೀಗ ಅವರ ಬೆಂಗಳೂರಿನ ನಿವಾಸದ ಮೇಲೆ ED ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯಾಚರಣೆ KPSC ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.