Chikkamagaluru: ಫ್ರೂಟ್ ಸಲಾಡ್ನಲ್ಲಿ ಹಾವಿನಂತಿರುವ ‘ಹ್ಯಾಮರ್ಹೆಡ್’ ಜಂತು ಪತ್ತೆ; ಗ್ರಾಹಕರಲ್ಲಿ ಆತಂಕ

Chikkamagaluru: ಕಾಫಿನಾಡಿನಲ್ಲಿ ಆಹಾರ ಪದಾರ್ಥಗಳಲ್ಲಿ ಹುಳು-ಹುಪ್ಪಟೆಗಳು ಪತ್ತೆಯಾಗುತ್ತಿರುವ ಸರಣಿ ಪ್ರಕರಣಗಳು ಮುಂದುವರೆದಿದೆ.
ಇದೀಗ ನಗರದ ಮೂಡಿಗೆರೆ ರಸ್ತೆಯಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ನೀಡಲಾಗಿದ್ದ ಫ್ರೂಟ್ ಸಲಾಡ್ನಲ್ಲಿ ಹಾವಿನಂತೆ ಕಾಣುವ ವಿಚಿತ್ರ ‘ಹ್ಯಾಮರ್ಹೆಡ್’ ಜಂತು ಪತ್ತೆಯಾಗಿ ಭಾರೀ ಆತಂಕ ಮೂಡಿಸಿದೆ.
ಸಣ್ಣ ಫ್ರೂಟ್ ಸಲಾಡ್ನ ಬಟ್ಟಲಿನಲ್ಲಿ ಇಷ್ಟು ದೊಡ್ಡದಾದ ಕ್ರಿಮಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಬಳಸಿದ ಪರಿಣಾಮ ಈ ಜೀವಿ ಸಲಾಡ್ಗೆ ಸೇರಿಕೊಂಡಿತೇ ಅಥವಾ ಹೊಟೇಲ್ನ ಹಸರಿಗೆ ಮಸಿ ಬಳಿಯಲು ಯಾರಾದರೂ ಉದ್ದೇಶಪೂರ್ವಕವಾಗಿ ಇದನ್ನು ತಂದಿಟ್ಟಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಇತ್ತೀಚೆಗೆ ಕಾಫಿನಾಡಿನ ಹೋಟೆಲ್ಗಳಲ್ಲಿ ಆಹಾರ ಪದಾರ್ಥಗಳಲ್ಲಿ ಹುಳು-ಹುಪ್ಪಟೆಗಳು ಪತ್ತೆಯಾಗುತ್ತಿರುವ ಘಟನೆಗಳು ಗ್ರಾಹಕರಲ್ಲಿ ಆತಂಕ ಮೂಡಿಸುತ್ತಿವೆ.
ಇದರ ಬೆನ್ನಲ್ಲೇ ಇದೀಗ ಫ್ರೂಟ್ ಸಲಾಡ್ನಲ್ಲೇ ಅಪಾಯಕಾರಿ ರೀತಿಯಲ್ಲಿ ಕಾಣುವ ಕ್ರಿಮಿ ಪತ್ತೆಯಾಗಿರುವುದು ಪ್ರವಾಸಿಗರು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಹೋಟೆಲ್ನಲ್ಲಿ ನೀಡಲಾಗುವ ಆಹಾರವನ್ನು ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿ ತಯಾರಿಸುವುದು ಅತ್ಯಂತ ಮುಖ್ಯ. ವಿಶೇಷವಾಗಿ ಫ್ರೂಟ್ ಸಲಾಡ್ ತಯಾರಿಸುವಾಗ ಹಣ್ಣುಗಳನ್ನು ಸಮರ್ಪಕವಾಗಿ ತೊಳೆದು, ಸ್ವಚ್ಛವಾದ ಪರಿಸರದಲ್ಲಿ ಕತ್ತರಿಸಿ ಬಳಸಬೇಕಾಗಿದೆ. ಇಂತಹ ಘಟನೆಗಳು ಆಹಾರ ತಯಾರಿಕೆಯ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಜಿಲ್ಲೆಯ ಹೋಟೆಲ್, ಬೇಕರಿ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸುರಕ್ಷತೆ ಸಂಪೂರ್ಣವಾಗಿ ಹದಗೆಡುತ್ತಿದೆಯೇ ಎಂಬ ಆತಂಕವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲ್ಲದೆ, ಆಹಾರದಲ್ಲಿ ಇಂತಹ ಜೀವಿಗಳು ಪತ್ತೆಯಾಗುವ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಬೇಕರಿಗಳು ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ.
ಇದನ್ನು ಓದಿ: Megunda:ಕೆಸರುಗದ್ದೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಮುದಾಯದ ಸಂಭ್ರಮ; 400ಕ್ಕೂ ಹೆಚ್ಚು ಮಂದಿ ಭಾಗಿ