Megunda:ಕೆಸರುಗದ್ದೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಮುದಾಯದ ಸಂಭ್ರಮ; 400ಕ್ಕೂ ಹೆಚ್ಚು ಮಂದಿ ಭಾಗಿ

Spread the love

Megunda: ಕೆಸರುಗದ್ದೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಮುದಾಯದ ಸಂಭ್ರಮ; 400ಕ್ಕೂ ಹೆಚ್ಚು ಮಂದಿ ಭಾಗಿ

Hebbar Brahmin community members participating in mud field sports at Megunda.
Hebbar Brahmin community members participating in mud field sports at Megunda.

Megunda: ಮೊನ್ನೆ ಭಾನುವಾರ ದಿನಾಂಕ 23.08.2026ರಂದು ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ, ಮೇಗುಂದ ಘಟಕ ಇವರಿಂದ ಹೆಬ್ಬಾರ ಬ್ರಾಹ್ಮಣ ಸಮುದಾಯದ ಸದಸ್ಯರಿಗಾಗಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು.

ಈ ಕ್ರೀಡಾಕೂಟವು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ, ಕೇಂದ್ರೀಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಜಯರಂಗ ಕೋಟೆತೋಟ ಇವರ ಗದ್ದೆಯಲ್ಲಿ ನಡೆಯಿತು.

ಮೇಗುಂದ ಘಟಕದ ಕಾರ್ಯದರ್ಶಿ ಶ್ರೀ ರಾಜಶೇಖರ, ಯುವ ಬಳಗದ ಅಧ್ಯಕ್ಷ ಶ್ರೀ ಪ್ರದೀಪ ಹೆಬ್ಬಾರ್ ಇವರುಗಳ ವಿಶೇಷ ಪ್ರಯತ್ನ ಕ್ರೀಡಾಕೂಟದ ಯಶಸ್ಸಿಗೆ ಬಹು ಮುಖ್ಯ ಕಾರಣ ಆಯ್ತು.

ಸುಮಾರು 400 ಜನ ಸಮಾಜದ ಸದಸ್ಯರು ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಹಾಗೂ ವೀಕ್ಷಿಸಲು ಬಂದಿದ್ದರು. ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಪುರುಷರಿಗೆ ಅದರಲ್ಲೂ ಬೇರೆ ಬೇರೆ ವಯೋಮಾನದವರಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಮಲ್ಲಗಂಬ ಏರುವುದು , ಅಡಿಕೆ ಹಾಳೆ ಸೋಗೆಯಲ್ಲಿ ದಂಪತಿಗಳ ಜಾರುಬಂಡಿ ಓಟ ಮುಂತಾದ ಸ್ಪರ್ಧೆಗಳು ನಡೆದವು. ದೊಡ್ಡ ಸಂಖ್ಯೆಯ ಮಹಿಳೆಯರು ಹಾಗೂ ಮಕ್ಕಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಇಡೀ ದಿನ ಕೆಸರಿನೊಂದಿಗೆ ಸಂಭ್ರಮಿಸಿದರು.

ಬೆಳಿಗ್ಗೆ ಕ್ರೀಡಾಕೂಟವನ್ನು ಕೊಪ್ಪದ ಶ್ರೀ ಗೋಪಾಲಕೃಷ್ಣ, ಶ್ರೀ ವಿಜಯರಂಗ ಕೋಟೆತೋಟ, ಗುಡ್ಡೆತೋಟ ಶ್ರೀ ಗೋಪಾಲಕೃಷ್ಣ, ಕೆಳಕುಡಿಕೆ ಶ್ರೀ ಮಾಧವ ರಾವ್ ಮುಂತಾದವರು ಸೇರಿ ತೆಂಗಿನ ಸಸಿ ನೆಡುವ ಮೂಲಕ, ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು.

ಹೆಬ್ಬಾರ ಬ್ರಾಹ್ಮಣ ಮಹಾಸಭಾ ಒಟ್ಟು 10 ಘಟಕಗಳಲ್ಲಿ ಒಂಬತ್ತು ಘಟಕದಿಂದ ಸದಸ್ಯರು ಆಗಮಿಸಿ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಗಳ ನಡುವಿನಲ್ಲಿ ಕೆಸರಿನ ನಡುವೆ ಮಹಿಳೆಯರು ಮಕ್ಕಳು ಮತ್ತು ಪುರುಷರು ಹಾಡಿಗೆ ಹೆಜ್ಜೆ ಹಾಕುವ ಮೂಲಕ ನಲಿದಾಡಿದರು. ಒಟ್ಟಾರೆಯಾಗಿ ಇಡೀ ದಿನ ಸಂಭ್ರಮದಿಂದ ಕಳೆಯಿತು.

ಸ್ಪರ್ಧೆಗಳ ನಂತರ ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಮಲೆನಾಡಿನ ಕೆಲವು ಯುವಕರು ಸೇರಿಕೊಂಡು ತಯಾರಿಸುತ್ತಿರುವ ಒಂದು ಬಹು ಮಹತ್ವಾಕಾಂಕ್ಷಿ ಸಿನಿಮಾ ” ಸ್ವರ್ಣ ಮೇದಿನಿ “ ಇದರ ತಂಡದ ಸದಸ್ಯರು, ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವ ಸಿನಿಮಾದ ಬಗ್ಗೆ ಮಾತನಾಡಲಾಯಿತು.

ಮಲೆನಾಡಿನಲ್ಲಿ ಬಹುತೇಕ ಭತ್ತ ಬೆಳೆ ಮತ್ತು ಗದ್ದೆ ಸಾಗುವಳಿ ಸಂಪೂರ್ಣ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಅಲ್ಲಲ್ಲಿ ಮಾತ್ರ ಸಾಗುವಳಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.

ಕೆಲವು ವರ್ಷಗಳ ಹಿಂದೆ ಗದ್ದೆ ಸಾಗುವಳಿ ಕೇವಲ ಒಂದು ಭತ್ತ ಬೆಳೆಯುವ ಕೃಷಿ ಆಗಿರದೆ ಅದೊಂದು ಸಾಂಸ್ಕೃತಿಕ ವೈಭವ ಆಗಿತ್ತು. ಆದರೆ ಆರ್ಥಿಕತೆಯ ಹಿಂದೆ ಓಡುತ್ತಿರುವ ನಮ್ಮ ರೈತರಿಗೆ ಭತ್ತ ಬೆಳೆ ಭಾರ ಅನಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಮೊನ್ನೆ ನಡೆದ ಈ ಕೆಸರುಗದ್ದೆ ಕ್ರೀಡಾಕೂಟ ಯುವ ಜನತೆಗೆ ಮತ್ತೊಮ್ಮೆ ಮಣ್ಣಿನ ವಾಸನೆಯನ್ನು ಪರಿಚಯಿಸಲು, ಅಘ್ರಣಿಸಲು, ಮಣ್ಣನ್ನು ಅಪ್ಯಾಯವಾಗಿ ಸ್ಪರ್ಶಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಿಕೊಟ್ಟಿತು. ಭತ್ತದ ಗದ್ದೆಯ ಮರೆಯಾಗುತ್ತಿರುವ ಸಾಂಸ್ಕೃತಿಕ ವೈಭವ ಮತ್ತೊಮ್ಮೆ ಮರುಕಳಿಸಲಿ ಎಂಬುದು ನಮ್ಮ ಆಶಯ.

ಮಾಹಿತಿ: ವಿಜಯರಂಗ ಕೋಟೆತೋಟ

 

ಇದನ್ನು ಓದಿ:Chikkamagaluru: ಕಸ್ತೂರಿರಂಗನ್ ವರದಿ ಮಲೆನಾಡಿಗರಿಗೆ ಮರಣಶಾಸನವಾಗಬಾರದು; ವಿಶ್ವನಾಥ್ ಗದ್ದೆಮನೆ*

Leave a Comment

Scroll to Top