Bengaluru: KPSC ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ

Bengaluru: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಪಟ್ಟ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಇದೀಗ ವಶಕ್ಕೆ ಪಡೆದಿದೆ.
ಜ್ಞಾನೇಂದ್ರ ಕುಮಾರ್ ಅವರ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಂಕ ತಿದ್ದುಪಡಿ ಹಾಗೂ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿತ್ತು.
ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು.
ಆಗಸ್ಟ್ 28ರಂದು ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಬಳಿಕ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ಮುಂದುವರಿಸಲಾಗಿತ್ತು.
ವಿಚಾರಣೆ ವೇಳೆ ಅಧಿಕಾರಿಯು ನೀಡಿದ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದಿದ್ದು, ತನಿಖೆಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸದ ಕಾರಣ ಅವರನ್ನು ವಶಕ್ಕೆ ಪಡೆಯಲಾಗಿದೆ.
ಜ್ಞಾನೇಂದ್ರ ಕುಮಾರ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಇದಕ್ಕೂ ಮೊದಲು, ಜಾರಿ ನಿರ್ದೇಶನಾಲಯ (ED) ಬೆಂಗಳೂರಿನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ದಾಳಿ ನಡೆಸುವ ಸಂದರ್ಭದಲ್ಲಿ ನಕಲಿ ಕೀಗಳನ್ನು ಬಳಸಲಾಗಿತ್ತು ಎನ್ನಲಾಗಿದೆ. ಇದಾದ ಬಳಿಕ ಅವರ ಲಕ್ನೋ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು.
ಇದೀಗ ಸಿಐಡಿ ತನಿಖೆ ಮುಂದುವರಿಸಿದ್ದು, ಜ್ಞಾನೇಂದ್ರ ಕುಮಾರ್ ಅವರ ವಿಚಾರಣೆಯ ಬಳಿಕ ಪ್ರಕರಣದಲ್ಲಿ ಇನ್ನಷ್ಟು ತಿರುವುಗಳು ಎದುರಾಗುವ ಸಾಧ್ಯತೆಗಳಿವೆ.
Read this: Dharmasthala: ಧರ್ಮಸ್ಥಳ ಪ್ರಕರಣ;ಚಿನ್ನಯ್ಯ ಸೇರಿ ಇತರರ ವಿರುದ್ಧ ಕ್ರಮಕ್ಕೆ SIT ಮನವಿ*