Dharmasthala: ಧರ್ಮಸ್ಥಳ ಸಮೂಹ ಅಂತ್ಯಕ್ರಿಯೆ ಪ್ರಕರಣ; ಚಿನ್ನಯ್ಯ ಸೇರಿ ಇತರರ ವಿರುದ್ಧ ಕಾನೂನು ಕ್ರಮಕ್ಕೆ SIT ಮನವಿ

Dharmasthala:ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ. ಸಿ.ಎನ್. ಚಿನ್ನಾ ಅಲಿಯಾಸ್ ಚಿನ್ನಯ್ಯ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದೆ.
ಎಸ್‌ಐಟಿ ಪೊಲೀಸ್ ವರಿಷ್ಠಾಧಿಕಾರಿ ಸಿ.ವಿ. ಸೈಮನ್ ನೇತೃತ್ವದ ತಂಡವು ಜುಲೈ 15ರಂದು ಬೆಳ್ತಂಗಡಿಯ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಟ್ಟು 7,005 ಪುಟಗಳ ಅಂತಿಮ ವರದಿಯನ್ನು ಸಲ್ಲಿಸಿದೆ.
ಸುಳ್ಳು ಆರೋಪ
ಅಂತಿಮ ವರದಿಯ ಪ್ರಕಾರ, ಚಿನ್ನಯ್ಯ ಸಲ್ಲಿಸಿದ್ದ ದೂರಿನಲ್ಲಿ ಮಾಡಲಾಗಿದ್ದ ಆರೋಪಗಳು ಸುಳ್ಳು ಎನ್ನಲಾಗಿದೆ. ಕೆಲ ಕಾರ್ಯಕರ್ತರ ಒತ್ತಡದಿಂದ ದೂರು ನೀಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್, ವಿಠಲ್ ಗೌಡ ಹಾಗೂ ಸುಜಾತಾ ಭಟ್ ಅವರ ಒತ್ತಡದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Read this: India Post GDS: ಅಂಚೆ ಇಲಾಖೆಯಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪ
ಚಿನ್ನಯ್ಯ ಸೇರಿದಂತೆ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 215 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 227, 228, 229, 230, 231, 233, 236, 240, 248 ಮತ್ತು 336ರ ಅಡಿಯಲ್ಲಿ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 3ಕ್ಕೆ ವಿಚಾರಣೆ ಮುಂದೂಡಿಕೆ
ಎಸ್‌ಐಟಿ ಸಲ್ಲಿಸಿರುವ 7,005 ಪುಟಗಳ ಅಂತಿಮ ವರದಿಯನ್ನು ಪರಿಶೀಲಿಸಿದ ಬಳಿಕ, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿದೆ.
ಇದೀಗ ಎಸ್‌ಐಟಿ ಅಂತಿಮ ವರದಿಯನ್ನು ನ್ಯಾಯಾಲಯವು ಹೇಗೆ ಪರಿಗಣಿಸುತ್ತದೆ ಮತ್ತು ಆರೋಪಿಗಳ ವಿರುದ್ಧ ಮುಂದಿನ ಕಾನೂನು ಪ್ರಕ್ರಿಯೆ ಯಾವ ರೀತಿಯಲ್ಲಿ ಸಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.