N R Pura:ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

N R Pura: 23 ವರ್ಷದ ಯುವಕನೊಬ್ಬ ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬೈರನಕಟ್ಟೆ ಸಮೀಪ ನಡೆದಿದೆ.
ಮೃತ ಯುವಕನನ್ನು ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ನಿಖಿಲ್ ಆರ್. ಸಿಂಗ್ ಎಂದು ಗುರುತಿಸಲಾಗಿದೆ.
ನಿಖಿಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಎನ್ನಲಾಗಿದೆ. ಆಕಸ್ಮಿಕವಾಗಿ ಮುಳುಗಿದ್ದಾರೆ. ಸ್ನೇಹಿತರು ನೆರವಿಗೆ ಬಂದರೂ ಕೂಡ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶೋಧ ಕಾರ್ಯವನ್ನು ನಡೆಸಿ, ನಿಖಿಲ್ ಅವರ ಮೃತದೇಹವನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.