Bengaluru: ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮಗೆ ಬೆಂಬಲವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಲಕ್ಷ್ಮಿಕಾಂತ್ ನಿಧನ

Bengaluru: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ಅವರಿಗೆ ಬೆಂಬಲವಾಗಿ ನಿಂತಿದ್ದ ಖ್ಯಾತ ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ ಪಲ್ಲವಿ ಲಕ್ಷ್ಮಿಕಾಂತ್ ನಿಧನರಾಗಿದ್ದಾರೆ.
ಸೆಪ್ಟೆಂಬರ್ 20ರಂದು ಅವರು ಹಠಾತ್ ನಿಧನರಾಗಿದ್ದು, ಕಿರುತೆರೆ ಹಾಗೂ ಫ್ಯಾಷನ್ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ರಿಷಿ ಡಿಸೈನ್’ ಎಂಬ ಸಂಸ್ಥೆಯ ಮೂಲಕ ಫ್ಯಾಷನ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪಲ್ಲವಿ ಲಕ್ಷ್ಮಿಕಾಂತ್ ಅವರು ಹಲವು ನಟ-ನಟಿಯರು ಹಾಗೂ ಕಿರುತೆರೆ ಕಲಾವಿದರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದರು.
ಕೃಷಿ ತಾಪಂಡ, ಮಧು, ಪ್ರೇಮಾ, ಅನುಪಮಾ, ಸಂಗೀತಾ ಭಟ್ ಸೇರಿದಂತೆ ಹಲವು ಕಲಾವಿದರೊಂದಿಗೆ ಅವರು ಕೆಲಸ ಮಾಡಿದ್ದರು.
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಅವರಿಗೆ ಪಲ್ಲವಿ ತಮ್ಮ ಬೊಟಿಕ್‌ನಲ್ಲಿ ಕೆಲಸದ ಅವಕಾಶ ನೀಡುವುದರ ಜೊತೆಗೆ ಆಶ್ರಯವನ್ನೂ ಕಲ್ಪಿಸಿದ್ದರು. ಮಲ್ಲಮ್ಮ ಬಿಗ್ ಬಾಸ್ ಕನ್ನಡ ಮನೆ ಪ್ರವೇಶಿಸುವ ಹಂತದಲ್ಲಿಯೂ ಪಲ್ಲವಿ ಬೆಂಬಲವಾಗಿ ನಿಂತಿದ್ದರು.
ಇಬ್ಬರೂ ಒಟ್ಟಿಗೆ ಮಾಡುತ್ತಿದ್ದ ರೀಲ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದವು. ಮಲ್ಲಮ್ಮ ಅವರ ಬಿಗ್ ಬಾಸ್ ಪಯಣದಲ್ಲಿಯೂ ಪಲ್ಲವಿ ನೀಡಿದ್ದ ಬೆಂಬಲ ಗಮನಾರ್ಹವಾಗಿತ್ತು.
ಇದೀಗ ಪಲ್ಲವಿ ಲಕ್ಷ್ಮಿಕಾಂತ್ ಅವರ ನಿಧನದ ಸುದ್ದಿ ಕಿರುತೆರೆ, ಚಿತ್ರರಂಗ ಹಾಗೂ ಫ್ಯಾಷನ್ ಲೋಕದ ಹಲವರಿಗೆ ಆಘಾತ ಉಂಟುಮಾಡಿದೆ.