Chikkamagaluru: ‘ವರ್ಕ್ ಫ್ರಂ ಹೋಮ್’ ಜಾಹೀರಾತು ನಂಬಿ ಮೋಸ ಹೋದ ಮಹಿಳೆ

Chikkamagaluru: ಸಾಮಾಜಿಕ ಜಾಲತಾಣದಲ್ಲಿ ಬಂದ ‘ವರ್ಕ್ ಫ್ರಂ ಹೋಮ್’ ಜಾಹೀರಾತನ್ನು ನಂಬಿದ ನಗರದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1,39,757 ಕಳೆದುಕೊಂಡಿರುವ ಘಟನೆ ನಡೆದಿದೆ.
ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ‘ವರ್ಕ್ ಫ್ರಂ ಹೋಮ್’ ಜಾಹೀರಾತನ್ನು ಗಮನಿಸಿ, ಅದನ್ನು ಕ್ಲಿಕ್ ಮಾಡಿದ್ದರು. ಬಳಿಕ ವಂಚಕರು ವಾಟ್ಸಾಪ್ ಮೂಲಕ ಸಂಪರ್ಕಿಸಿ, ಪ್ರತಿಷ್ಠಿತ ಆನ್‌ಲೈನ್ ಶಾಪಿಂಗ್ ವೇದಿಕೆಯ ಹೆಸರಿನಲ್ಲಿ ಬಟ್ಟೆಗಳನ್ನು ಆರ್ಡರ್ ಮಾಡುವ ಸರಳ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.
ಆರಂಭದಲ್ಲಿ ನೋಂದಣಿ ಶುಲ್ಕವೆಂದು ಸಣ್ಣ ಮೊತ್ತವನ್ನು ಪಡೆದ ವಂಚಕರು, ನಂತರ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಮಾಡಿದ್ದಾರೆ. ಹಂತ ಹಂತವಾಗಿ ಮಹಿಳೆಯಿಂದ ಒಟ್ಟು ₹1,39,757 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲಸ ಪೂರ್ಣಗೊಳಿಸಿದ ಬಳಿಕ ಹಣ ಹಾಗೂ ಲಾಭದ ಮೊತ್ತವನ್ನು ಹಿಂದಿರುಗಿಸದೆ ವಂಚಕರು ಮೋಸ ಮಾಡಿದ್ದಾರೆ. ತಾನು ವಂಚನೆಗೊಳಗಾಗಿರುವುದು ಅರಿವಾದ ಬಳಿಕ ಮಹಿಳೆ ಸೈಬರ್ ಸಹಾಯವಾಣಿ 1930ಕ್ಕೆ ದೂರು ನೀಡಿದ್ದಾರೆ.
ಈ ಕುರಿತು ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.