Chikkamagaluru: ಕಣ್ಣಿನ ತಪಾಸಣೆಗೆ ತೆರಳಿದ್ದ ತಾಯಿ-ಮಗು ನಾಪತ್ತೆ

Chikkamagaluru: ಕಣ್ಣಿನ ತಪಾಸಣೆಗಾಗಿ ಮೂರು ವರ್ಷದ ಮಗನೊಂದಿಗೆ ಆಸ್ಪತ್ರೆಗೆ ಹೋಗಿದ್ದ ತಾಯಿ ಹಾಗೂ ಮಗು ವಾಪಸ್ ಬಾರದೆ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬೂಚಿನಹಳ್ಳಿಯ ಕವಲು ಗ್ರಾಮದ ನಿವಾಸಿ ರವಿಕುಮಾರ್ ಅವರ ಪತ್ನಿ ಅಕ್ಷತಾ ಹಾಗೂ ಮೂರು ವರ್ಷದ ಮಗ ವಿರಾಟ್ ನಾಪತ್ತೆಯಾಗಿದ್ದಾರೆ. ವಿರಾಟ್‌ಗೆ ಕಣ್ಣಿನ ಸಮಸ್ಯೆ ಇದ್ದ ಕಾರಣ ಚಿಕಿತ್ಸೆ ಮತ್ತು ತಪಾಸಣೆಗಾಗಿ ಸಿಂಡಿಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಅಕ್ಷತಾ ಹೊರಟಿರುತ್ತಾರೆ.
ಆಸ್ಪತ್ರೆ ತೆರಳಿದ ತಾಯಿ ಹಾಗೂ ಮಗ ಸಂಜೆಯಾದರೂ ಮನೆಗೆ ಬರದ ಕಾರಣ ಆತಂಕಗೊಂಡ ಪತಿ ರವಿಕುಮಾರ್ ಹಾಗೂ ಕುಟುಂಬದವರು ಮೊಬೈಲ್‌ಗೆ ಕರೆ ಮಾಡಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಕುಟುಂಬದವರು ಸಿಂಡಿಗೆರೆ ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಅಕ್ಕಪಕ್ಕದವರ ಮನೆಯಲ್ಲಿ ಹುಡುಕಾಟ ಕೂಡ ನಡೆಸಿರುತ್ತಾರೆ.
ಯಾವುದೇ ಸುಳಿವು ಸಿಗದ ಕಾರಣ ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.