Bengaluru: ಹಿರಿಯ ನಟಿ ಲಲಿತಮ್ಮ ನಿಧನ; 65ನೇ ವಯಸ್ಸಿನಲ್ಲಿ ಕೊನೆಯುಸಿರು

Bengaluru: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಹಾಗೂ ಖಳನಟಿ ಲಲಿತಮ್ಮ (65) ಅವರು ಇಂದು ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗಿದ್ದ ಲಲಿತಮ್ಮ ಅವರು ಬೆಂಗಳೂರಿನ ‘ಅಮ್ಮನ ಮಡಿಲು’ ಟ್ರಸ್ಟ್ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಅವರು ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು. ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದ ‘ಸರಾಯಿ ಶಾರದೆ’ ಎಂಬ ಲೇಡಿ ವಿಲನ್ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ಇದರ ಜೊತೆಗೆ ದುನಿಯಾ ವಿಜಯ್ ಅಭಿನಯದ ‘ಜಂಗ್ಲಿ’, ದಿಗಂತ್ ನಟನೆಯ ‘ಲೈಫು ಇಷ್ಟೇನೆ’, ‘ಜಾಕಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
ಕಿರುತೆರೆಯಲ್ಲೂ ಲಲಿತಮ್ಮ ಅವರು ಗಮನ ಸೆಳೆದಿದ್ದರು. ‘ರಂಗೋಲಿ’, ‘ಮಾಂಗಲ್ಯ’ ಸೇರಿದಂತೆ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ತಾಯಿ ಹಾಗೂ ಅಜ್ಜಿ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.
35 ವರ್ಷಕ್ಕೂ ಹೆಚ್ಚು ಕಾಲ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, 180ಕ್ಕೂ ಹೆಚ್ಚು ನಾಟಕಗಳಲ್ಲಿಯೂ ಅಭಿನಯಿಸಿದ್ದರು.
ಲಲಿತಮ್ಮ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Read this: Koppa: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ; ಯುವತಿ ಆತ್ಮಹತ್ಯೆ