Kalasa: ಸೌರ ಪಂಪ್ ಸೆಟ್ ಕೊಡಿಸುವುದಾಗಿ ₹3 ಲಕ್ಷ ವಂಚನೆ!

Kalasa: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ಕುಸುಮ್ ಯೋಜನೆ’ ಅಡಿಯಲ್ಲಿ ಸೌರ ಪಂಪ್ ಸೆಟ್ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿ ಯುವಕನಿಂದ ಬರೋಬ್ಬರಿ 3 ಲಕ್ಷ ರೂ. ವಂಚಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ವ್ಯಕ್ತಿಯೊಬ್ಬರು ಈ ಯೋಜನೆಯಡಿ 3 ಎಚ್‌ಪಿ ಸೌರ ಪಂಪ್ ಸೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ವಂಚಕರು, ನಕಲಿ ಗುರುತಿನ ಚೀಟಿಗಳು, ಅಧಿಕಾರ ಪತ್ರಗಳು ಹಾಗೂ ಹಣ ಪಾವತಿಸಿದ ರಶೀದಿಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ಯುವಕನನ್ನು ನಂಬಿಸಿದ್ದಾರೆ.
ವಂಚಕನನ್ನು ಬೆಂಗಳೂರಿನ ನಿವಾಸಿ ಮದನ್ ಎಂದು ಗುರುತಿಸಲಾಗಿದೆ.
ನಂತರ ಸಮೀಕ್ಷೆ ಮತ್ತು ಸಬ್ಸಿಡಿ ಪ್ರಕ್ರಿಯೆಯ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ಹಣ ಪಡೆದ ಬಳಿಕ ವಂಚಕರು ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸೌರ ಪಂಪ್ ಸೆಟ್ ಮಂಜೂರು ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಸಂತ್ರಸ್ತರು ದೂರು ನೀಡಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಸಾರ್ವಜನಿಕರು ಎಚ್ಚರಿಕೆ ವಹಿಸಿ: ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಅಪರಿಚಿತರು ಹಣಕ್ಕೆ ಬೇಡಿಕೆ ಇಟ್ಟರೆ, ಅವರ ಗುರುತು ಮತ್ತು ದಾಖಲೆಗಳನ್ನು ಪರಿಶೀಲಿಸದೆ ಹಣ ವರ್ಗಾಯಿಸಬೇಡಿ.