Self Growth: ಭಾವನೆಗಳ ನಿಯಂತ್ರಣ:ಮನುಷ್ಯ ಎಂದಮೇಲೆ ಪ್ರತಿದಿನವೂ ಆತನಿಗೆ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಕ್ಷಣವೂ ಆತನಿಗೆ ಒಂದೇ ರೀತಿಯಾಗಿ ಯೋಚಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನೂ ಯಾವಾಗಲೂ ಒಂದೇ ರೀತಿಯಾಗಿ ಕಾಣಲೂ ಕೂಡ ಸಾಧ್ಯವಿಲ್ಲ.

Self Growth: ಮನುಷ್ಯನ ಮನಸ್ಸೇ ಹಾಗೆ ಮರ್ಕಟನಂತೆ ಅದಕ್ಕೆ ಕಡಿವಾಣ ಹಾಕುವುದು ಸುಲಭದ ಮಾತಲ್ಲ. ನಮ್ಮ ಅಸ್ತಿತ್ವ ಇರುವುದು ಆತ್ಮದಲ್ಲಿ ಹಾಗೂ ಅದರ ಮೂಲಕ ನಾವು ಯೋಚಿಸಿ ನಡೆದುಕೊಳ್ಳಬೇಕೆ ವಿನಾ ಮನಸ್ಸಿನ ಮೂಲಕವಲ್ಲ.
ಮನಸ್ಸು ಎಲ್ಲವನ್ನೂ ಗ್ರಹಿಸುತ್ತದೆ ಆದರೆ ಆತ್ಮ ಶುದ್ಧತೆಯನ್ನು ಮಾತ್ರವೇ ಗ್ರಹಿಸುತ್ತದೆ. ಹಾಗೂ ಅದು ಶಾಶ್ವತವಾದುದು ಕೂಡ!
ಆದರೆ ಸಾಮಾನ್ಯವಾಗಿ ಮನುಷ್ಯ ಮನಸ್ಸಿನ ಮಾತಿಗೆ ಬೆಲೆ ಕೊಡುತ್ತಾನೆ. ಮತ್ತು ಅದರಂತೆ ನಡೆದುಕೊಳ್ಳುತ್ತಾನೆ. ಹೀಗಿರುವಾಗ ಮನಸ್ಸು ದುಃಖದಲ್ಲಿದ್ದರೆ ದುಃಖ ಅಥವಾ ಕ್ರೋಧದ ಮೂಲಕ ನಾವು ಯೋಚಿಸುತ್ತೇವೆ. ಮತ್ತು ನಿರ್ಧರಿಸುತ್ತೇವೆ.
ಹೀಗೆ ಪರಿಸ್ಥಿತಿಗೆ ತಕ್ಕ ನಿರ್ಧಾರಗಳನ್ನು ಮನಸ್ಸು ಕೊಡುತ್ತದೆ. ಆದರೆ ಇಂಥ ನಿರ್ಧಾರಗಳು ಪರಿಸ್ಥಿತಿಯನ್ನು ಹತೋಟಿಗೆ ತರುವುದೇ? ಖಂಡಿತ ಇಲ್ಲ. ಮತ್ತಷ್ಟು ಮಗದಷ್ಟು ಹಾಳುಗೆಡವುತ್ತದೆ. ಪರಿಸ್ಥಿತಿಗಳನ್ನು ಹಿಡಿತಕ್ಕೆ ತರಬೇಕು. ಎಂದುಕೊಳ್ಳುವವರು ಹಾಗೆಯೇ ಅಂದುಕೊಳ್ಳದೇ ಇರುವವರು ಕೂಡ ಮೊದಲು ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳಬೇಕು.
ಅರ್ಥಾತ್ ಭಾವನೆಗಳನ್ನು ನಿಯಂತ್ರಿಸಬೇಕು. ಭಾವನೆಗಳು ನಮ್ಮ ಕೈಗೊಂಬೆಯಾಗಬೇಕೆ ವಿನಾ ಅವುಗಳೇ ನಮ್ಮನ್ನು ಹಿಡಿದಿಟ್ಟುಕೊಳ್ಳಬಾರದು..
ಹಲವು ಬಾರಿ ಒಮ್ಮೆ ಕೈಗೊಂಡ ನಿರ್ಧಾರ ಇನ್ನೊಮ್ಮೆ ಯೋಚಿಸಿದಾಗ ತಪ್ಪೆನಿಸಬಹುದು. ಹಾಗೂ ಅದಾಗಲೇ ಸಮಯ ಜಾರಿಹೋಗಿರುತ್ತದೆ. ಹೀಗೆ ದೃಢತೆಯಿಂದ ಯಾವಾಗ ನಮಗೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ.
ಯಾವಾಗ ನಮ್ಮ ನಿರ್ಧಾರಗಳು ಪದೇ-ಪದೇ ಬದಲಾವಣೆಯೆಡೆಗೆ ಸಾಗುತ್ತವೆ. ಯಾವಾಗ ಅವು ನಮಗೆ ನೋವುಂಟು ಮಾಡುತ್ತವೆಯೋ ಆಗ ನಾವು ನಮ್ಮ ಮೇಲಿನ ಹಿಡಿತ ಕಳೆದುಕೊಂಡಿರುತ್ತೇವೆ.
ದೃಢತೆಯಿಂದ ಕೈಗೊಂಡ ನಿರ್ಧಾರ ಕಠಿಣವಾಗಿದ್ದರೂ ಕಹಿಯೆನಿಸುವುದಿಲ್ಲ. ಅರ್ಥಾತ್ ಭಾವನೆಗಳು ಆಗ ನಾವು ಹೇಳಿದಂತೆ ಕೇಳುತ್ತಿರುತ್ತವೆ. ಯಾವಾಗ ಭಾವನೆಗಳ ಮೇಲೆ ನಮಗೆ ನಿಯಂತ್ರಣ ಇರುವುದಿಲ್ಲ.
ನಾವು ಅತಿಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಸುಲಭದ ಪರಿಹಾರಗಳನ್ನು ಹುಡುಕುತ್ತೇವೆ. ಹಾಗೂ ಮುಂದೆ ಅವುಗಳಿಂದಾಗುವ ಕಷ್ಟಗಳ ಕುರಿತಾಗಿ ಚಿಂತಿಸುವುದಿಲ್ಲ.
ಕೆಲವು ಎಲ್ಲರನ್ನು ನಮ್ಮವರು ಎಂದರೆ ಕೆಲವೊಮ್ಮೆ ಯಾರೂ ನಮ್ಮವರಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತೇವೆ. ತೋಚಿದ್ದನ್ನು ತಕ್ಷಣವೇ ಮಾಡಿಬಿಡುತ್ತೇವೆ.
ಇಂತಹ ಸಮಯದಲ್ಲಿ ನಮ್ಮನ್ನು ನಾವೇ ಸಂಭಾಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅದರ ಅರಿವೇ ಇರುವುದಿಲ್ಲ ನಮಗೆ. ಮೊದಲು ನಾವೇನೆಂದು ನಮಗೆ ಅರಿವಾಗಬೇಕು ಆಗಲೇ ಹೇಗಿರಬೇಕಿತ್ತು.
ಮತ್ತು ಮುಂದೆ ಹೇಗಿರಬೇಕು ಎಂಬುದರ ಕುರಿತಾಗಿ ತಿಳಿಯುತ್ತದೆ. ನಮ್ಮ ಮನಸ್ಸನ್ನು ಮೊದಲು ಜಾಗೃತಗೊಳಿಸಬೇಕು. ಇಲ್ಲವಾದಲ್ಲಿ ನಮಗೆ ಅದು ಮುಳುವಾಗಬಹುದು. ಹಾಗೂ ಅದನ್ನು ಬಗೆಹರಿಸುವುದು ಸುಲಭದ ಮಾತಲ್ಲ.
ಸ್ಥಿರವಾದ ಭಾವನೆಗಳು ಎಂದಿಗೂ ನಮ್ಮನ್ನು ಯಾರಮುಂದೆಯೂ ಚಿಕ್ಕವರನ್ನಾಗಿ ಮಾಡುವುದಿಲ್ಲ!!
Self Growth: ವಿಕಾಸವೇ ಪುನರ್ಜನ್ಮ:
ಸತ್ತು ಬದುಕಿದೆವು’ ಎಂದು ಹಲವರು ಹೇಳುವುದನ್ನು ನಾವು ಕೇಳಿರುತ್ತೇವೆ.ಕೆಲವರು ಭಯದಿಂದ ಹೊರಬಂದು ಈ ತೆರೆನಾಗಿ ಹೇಳುತ್ತಾರೆ. ಇನ್ನೂ ಹಲವರು ಜೀವನದಲ್ಲಿ ಸೋತು ಸುಣ್ಣವಾಗಿ ಕೊನೆಗೂ ಗೆದ್ದು ಬಂದಾಗ ಹೇಳುತ್ತಾರೆ.
ಹೌದು ಮನುಷ್ಯ ಜೀವನ ಅಷ್ಟೇ ಅಲ್ಲ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ಕಷ್ಟವಿರುತ್ತದೆ. ‘ಮನುಷ್ಯನಿಗೆ ಕಷ್ಟ ಬರದೇ ಮರಕ್ಕೆ ಬರುತ್ತದೆಯೇ?’. ಅನ್ನುವ ಹಾಗೆ ಅದನ್ನು ನಿಭಾಯಿಸಿಕೊಂಡು ಹೋಗುವ ಮನೋಭಾವ ದೃಢತೆ ನಮ್ಮಲ್ಲಿರಬೇಕು!
ಎಷ್ಟೋ ಬಾರಿ ಕೆಲವರು ಯಾವುದೇ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಹೋಗುವುದಿಲ್ಲ. ಮುಂದೆ ತನಗೆಲ್ಲಿ ಸಮಸ್ಯೆ ಉಂಟಾಗುತ್ತದೋ ಎಂದು. ಇನ್ನು ಹಲವರು ಅರ್ಧ ದಾರಿ ಸವೆಸಿದ ನಂತರ ಕಷ್ಟಗಳನ್ನು ಎದುರಿಸಲಾಗದೇ ಹೇಡಿತನದಿಂದ ಹಿಂದಿರುಗಿಬಿಡುತ್ತಾರೆ.
ಮತ್ತು ಎಲ್ಲರೆದುರಿಗೂ ನಗೆಪಾಟಲಾಗಿ ಬಿಡುತ್ತಾರೆ. ಆದರೆ ಸೋಲನ್ನು ನಾವ್ಯಾಕೆ ಪ್ರೀತಿಸುವುದಿಲ್ಲ.ಎಂದು ನಾವು ನಮ್ಮನೊಮ್ಮೆಯಾದರೂ ಕೇಳಿಕೊಂಡರೆ ತಿಳಿಯುತ್ತದೆ. ಗೆಲುವು ಹಾಗೂ ಸೋಲುಗಳು ನಮಗೆಷ್ಟು ಮುಖ್ಯವೆಂದು.
ಪ್ರತಿಯೊಬ್ಬ ಜೀವಿಯ ಜೀವನದಲ್ಲಿ ಸೋಲುಗಳು ಬಹಳಷ್ಟು ಮುಖ್ಯ ಪಾತ್ರ ವಹಿಸುತ್ತದೆ. ಪ್ರತಿಬಾರಿ ತಾನು ಬಂದಾಗಲೂ ಒಂದೊಂದು ಪಾಠ ಕಲಿಸಿಹೋಗುತ್ತದೆ. ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಹೆಚ್ಚಿನವರು ಅದರಿಂದ ಉಂಟಾಗುವ ದುಃಖವನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತಾರೆ.
ಮತ್ತು ಅದು ತಮ್ಮ ಹಣೆಬರಹವೇ ತಿಳಿಯುತ್ತಾರೆ. ತಿಳಿದು ಮುಂದೆ ನಡೆಯುವವರು ಕೆಲವರಾದರೆ ಹಿಂದೆಯೇ ಉಳಿಯುವವರು ಹಲವರು. ಆದರೆ ‘ಸೋಲೇ ಗೆಲುವಿನ ಮೆಟ್ಟಿಲು’ ನಮ್ಮ ಪ್ರತಿಯೊಂದು ಸೋಲು ನಮಗೆ ಒಂದೊದು ಪಾಠ ಕಲಿಸುತ್ತದೆ.
ಮತ್ತು ಅತ್ಯದ್ಭುತ ಅನುಭವಗಳನ್ನು ನೀಡುತ್ತದೆ, ಅದನ್ನು ನಾವು ತಿಳಿಯಬೇಕಷ್ಟೆ!! ದೇವಸ್ಥಾನದಲ್ಲಿ ಒಮ್ಮೆಲೇ ದೇವರ ದರ್ಶನ ಪಡೆಯುವುದಕ್ಕಿಂತ ಸರತಿ ಸಾಲಿನಲ್ಲಿ ನಿಂತು ಕಾದು-ಕಾದು ಪಡೆಯುವ ದರ್ಶನ ಹೆಚ್ಚಿನ ತೃಪ್ತಿ ನೀಡುತ್ತದೆ.
ಹೀಗೆಯೇ ಸೋಲುಗಳ ನಂತರ ಉಂಟಾಗುವ ಗೆಲುವು ನಮ್ಮ ತೃಪ್ತಿಗೆ ಕಾರಣವಾಗುತ್ತದೆ. ಕೆಲವರಿಗೆ ಮೊದಲು ಸುಖವೇ ಇದ್ದು ನಂತರದಲ್ಲಿ ದುಃಖ ಎದುರಾಗುತ್ತದೆ. ಇನ್ನೂ ಕೆಲವರಿಗೆ ಮೊದಲು ದುಃಖವೇ ಇದ್ದು ನಂತರದಲ್ಲಿ ಸುಖ ದೊರೆಯುತ್ತದೆ.
ಹಾಗೂ ಸುಖವಿದ್ದವರಿಗೆ ಅದರ ಬೆಲೆ ತಿಳಿದಿರುವುದಿಲ್ಲ ಅದಕ್ಕಾಗಿಯೇ ಅವರಿಗೆ ದುಃಖದ ದರ್ಶನ ಮಾಡಿಸುವುದು ಭಗವಂತ. ಯಾವಾಗ ದುಃಖದ ಅನುಭವವಾಗುವುದೋ ಆಗಲೇ ಸುಖದ ಮಹತ್ವದ ಅರಿವಾಗುವುದು.
ಮತ್ತು ಯಾವಾಗ ಸೋಲಿನ ರುಚಿ ದೊರೆಯುವುದೋ ಆಗಲೇ ಗೆಲುವಿನ ರುಚಿಯ ಬಗ್ಗೆ ಕುತೂಹಲ ಉಂಟಾಗುವುದು!!
ಗೆಲುವಿಗಾಗಿ, ಸುಖಕ್ಕಾಗಿ ಹಪಹಪಿಸುವ ಜೀವಗಳೆಷ್ಟು ಇವೆ ಈ ಪ್ರಪಂಚದಲ್ಲಿ, ಹಾಗಾದರೆ ಪ್ರತಿಯೊಬ್ಬರಿಗೂ ಗೆಲುವು ದೊರೆಯುವುದೇ? ಇಲ್ಲಾ. ಎಲ್ಲರಿಗೂ ಅವರವರ ಪರಿಶ್ರಮ ಹಾಗೂ ಕರ್ಮದ ಅನುಸಾರವಾಗಿ ಫಲ ನೀಡುತ್ತಾನೆ ಭಗವಂತ.
‘ಗೆದ್ದೇ ಗೆಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆ ತನ’ ಎನ್ನುವಂತೆ ಸತ್ಕರ್ಮಿಗಳಿಗೆ ಗೆಲುವಂತೂ ಕಟ್ಟಿಟ್ಟ ಬುತ್ತಿ. ಅದನ್ನು ಸ್ವತಃ ಭಗವತನಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.
ಯಾರೂ ತಮ್ಮ ಸ್ವಂತ ನಿಲುವಿನಿಂದ ಏಳಿಗೆಯಾಗುತ್ತಾರೋ. ಮತ್ತು ಗೆಲುವನ್ನು ಕಾಣುತ್ತಾರೆಯೋ ಅವರು ಮತ್ತೆಂದಿಗೂ ಜೀವನದಲ್ಲಿ ಕುಗ್ಗಿಹೋಗುವುದಿಲ್ಲ. ದೇವರು ಕೊಟ್ಟ ಜನ್ಮಕ್ಕಿಂತ, ತಾನು ತಾಯಿಯಾಗುವಾಗ ಪಡೆಯುವ ಮರುಜನ್ಮವೇ ತಾಯಿಗೆ ಶ್ರೇಷ್ಟವೆನ್ನಿಸುವ ಹಾಗೆ.
ತಾವೇ ಗಳಿಸಿ ಜೀವನ ನಡೆಸುವುದು ಹಾಗೂ ಸ್ವಂತ ಬಲದಿಂದ ಕಷ್ಟದಿಂದ ಮೇಲೆದ್ದು ನಿಲ್ಲುವುದೇ ನಮಗೆ ಸಿಗುವ ಪುನರ್ಜನ್ಮ. ಮತ್ತು ಅದನ್ನು ನಾವೇ ಪಡೆದಿರುತ್ತೇವೆ ಪೂರ್ವಜರಿಂದ ಬಂದಿರುವುದಿಲ್ಲ!!
ನಿರಂತರ ಅರಿವು :
ಮನುಷ್ಯ ಕೇವಲ ವಿದ್ಯಾವಂತನಾಗಿದ್ದರೆ ಸಾಲದು ಬುದ್ಧಿಯೂ ಇರಬೇಕು ಎಂದು ಹೇಳುವುದನ್ನು ಹಲವಾರು ಬಾರಿ ನಾವು ಕೇಳಿದ್ದುಂಟು. ಹೌದು! ವಿದ್ಯೆಯಾದರೂ ಇರಬೇಕು ಇಲ್ಲವಾದಲ್ಲಿ ಬುದ್ಧಿಯಾದರೂ ಇರಬೇಕು. ವಿದ್ಯೆಯಿರದಿರೆ ನಡೆಯುತ್ತದೆನೋ ಆದರೆ ಬುದ್ಧಿ ಇರದಿರೆ ಬದುಕು ನಗೆಪಾಟಲಾಗಿ ಬಿಡುತ್ತದೆ.
ಬದುಕುವುದು ಸುಲಭ ಆದರೆ ಹೇಗೆ ಬದುಕಬೇಕೆಂಬುದು ಬಹಳ ಅಗತ್ಯವಿರುವ ವಿಚಾರವಿಲ್ಲಿ. ಸುಖಾಸುಮ್ಮನೆ ಬದುಕಿದರೆ ಅಂತಹ ಬದುಕಿಗೆ ಅರ್ಥ ದೊರೆಯದು. ಅಷ್ಟಕ್ಕೂ ಸುಖಾಸುಮ್ಮನೆ ಬದುಕಲು ಸಾಧ್ಯವಿದೆಯೇ ಎನ್ನುವುದಾದರೆ ಖಂಡಿತಾ ಸಾಧ್ಯವಿಲ್ಲ.
ಜೀವನ ಎಂದರೆ ಹಲವಾರು ಕಷ್ಟಗಳ ಸರಮಾಲೆ. ಕೆಲವು ಸುಖಗಳ ಹೊತ್ತಿರುವ ಬದುಕು. ಕೆಲವೊಮ್ಮೆ ನಮ್ಮಿಂದಲೇ ಆ ಕೆಲವನ್ನು ಕೂಡ ಕಳೆದುಕೊಂಡುಬಿಡುತ್ತದೆ.
ಮನುಷ್ಯ ಎಷ್ಟೋ ಬಾರಿ ಅಂದುಕೊಳ್ಳುವುದುಂಟು. ತಾನು ಧರ್ಮದ ದಾರಿಯಲ್ಲಿಯೇ ಸಾಗಬೇಕೆಂದು ಆದರೆ ಆತ ಧರ್ಮದ ದಾರಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವ ಮೊದಲು ನಡೆಯಲು ಪ್ರಾರಂಭಿಸುತ್ತಾನೆ. ಇದುವೇ ಆತನ ಮೂರ್ಖತನದ ಪರಮಾವಧಿಯಾಗಿರುತ್ತದೆ.
ಶ್ರೇಷ್ಟರಿಂದ ವಿದ್ಯೆ ಕಲಿತ ಅರ್ಜುನ ತಾನು ಧರ್ಮಿಯಾದ ಕಾರಣ ತನ್ನವರ ವಿರುದ್ಧವೇ ಯುದ್ಧ ಮಾಡಲಾರೆ ಎನ್ನುತ್ತಾನೆ. ಹಾಗೂ ಅಶ್ವತ್ಥಾಮ ಸಾಯದೇ ಆತ ಸತ್ತಿದ್ದಾನೆ. ಎಂದು ಸುಳ್ಳು ಹೇಳಲಾರೆ ಎಂದು ಮೊದಲಿಗೆ ಧರ್ಮರಾಯ ಯುಧಿಷ್ಠಿರ ಕೂಡ ಹೇಳುತ್ತಾನೆ.
ಆದರೆ ವಾಸ್ತವದಲ್ಲಿ ಈ ಇಬ್ಬರ ಮಾತುಗಳು ಅನುಷ್ಠಾನಕ್ಕೆ ಬರುವುದೇ ಇಲ್ಲ. ಇದರ ಕುರಿತಾಗಿ ಅವರಿಗೆ ಧರ್ಮದ ಅರ್ಥವನ್ನು ಗೀತೆಯಲ್ಲಿ ಭಗವಂತನೇ ಹೇಳಿದಂತೆ ಧರ್ಮಕ್ಕೋಸ್ಕರ ಅಧರ್ಮವನ್ನೇ ಮಾಡಿದರೂ ಕೂಡ,
ಕೊಟ್ಟ ಮಾತನ್ನೇ ತಪ್ಪಿದರೂ ಕೂಡ ಅದು ಧರ್ಮದ ಒಂದು ಭಾಗವೇ ಆಗಿರುತ್ತದೆ.
ಹಾಗೂ ಯುದ್ಧ ಗೆದ್ದಾಗ ಹೋರಾಡಿದ್ದು ಒಳ್ಳೆಯದಕ್ಕೇ ಎಂದು ಅರಿವಾಗುವುದಕ್ಕಿಂತ, ಕುರುಕ್ಷೇತ್ರದ 18 ದಿನವೂ ಎಷ್ಟೇ ಸಾವು-ನೋವಾದರೂ ಕೂಡ ಅಲ್ಲಿ ಧರ್ಮದ ಸ್ಥಾಪನೆಯಾಗುತ್ತಿತ್ತು ಎಂದು ತಿಳಿಯುವುದು ಮುಖ್ಯ.
ದುಃಖದಲ್ಲಿದ್ದಾಗ ಪಶ್ಚಾತ್ತಾಪ ಪಡುವುದಕ್ಕಿಂತ ಪ್ರತಿಕ್ಷಣವೂ ನಾವೇನು ಮತ್ತು ಏನು ಮಾಡುತ್ತಿದ್ದೇವೆ ಎಂಬುದರ ಅರಿವಿರಬೇಕು.
ಮೈ ತುಂಬಾ ಕಣ್ಣೀರಬೇಕು ಎಂಬಂತೆ. ಆ ಕ್ಷಣಕ್ಕೆ ಸಮಸ್ಯೆಯಿಂದ ಹೊರಬಂದರೆ ಸಾಕು ಎಂಬಂತೆ ನಾವು ಹಲವಾರು ಬಾರಿ ತಾತ್ಕಾಲಿಕ ಪರಿಹಾರಗಳ ಬೆನ್ನತ್ತಿ ಹೊರಟುಬಿಡುತ್ತೇವೆ. ಆ ಕ್ಷಣದ ಬಳಿಕ ಮತ್ತೆ ಅದು ಬೆನ್ನಿಗೆ ಬಿದ್ದ ಬೇತಾಳವೇ ಆಗಿರುತ್ತದೆ.ಎಂಬುದನ್ನು ಮರೆತುಬಿಡುತ್ತೇವೆ.
ಈ ಕ್ಷಣದ ಅರಿವಿದೆ ಎಂದರೆ ದೂರಾಲೋಚನೆ ಕೂಡ ಈ ಕ್ಷಣಕ್ಕೆ ಅನಿವಾರ್ಯ ಎಂಬುದರ ಅರಿವು ಕೂಡ ಇರಬೇಕಾಗುತ್ತದೆ.
ನಿಯಂತ್ರಣ:
ನಮ್ಮ ನಡೆಯ ಮೇಲೆ ನಮಗೆ ನಿಯಂತ್ರಣವಿರಬೇಕು.ಹಾಗೂ ಅದನ್ನು ಹೇಗೆ ಸಾಗಿಸಬೇಕು ಎಂಬುದರ ಅರಿವಿರಬೇಕು.ಗುರಿ ಮುಟ್ಟುತ್ತೇನೆ ಎನ್ನುವುದು ಮುಖ್ಯವಲ್ಲ. ಅದನ್ನು ಮುಟ್ಟುವ ದಾರಿಯನ್ನು ಹೇಗೆ ಸವೆಸುತ್ತೇನೆ.ಎಂಬುದರ ಕುರಿತಾದ ತಿಳಿವಳಿಕೆ ಆ ದಾರಿಯಲ್ಲಿಡುವ ಪ್ರತಿಯೊಂದು ಹೆಜ್ಜೆಯೊಂದಿಗಿರಬೇಕು.
ಆಗಲೇ ನಿರಾತಂಕದಿಂದ ಗುರಿ ತಲುಪಲು ಸಾಧ್ಯ! ಯಾವಾಗ ನಮಗೆ ನಮ್ಮ ಪ್ರತಿಯೊಂದು ಹೆಜ್ಜೆಯ ಕುರಿತಾಗಿ ತಿಳಿದಿರುತ್ತದೆಯೋ ಆಗಲೇ ಪ್ರತಿ ಹೆಜ್ಜೆಯೂ ಫಲ ಕೊಡಲು ಸಾಧ್ಯ.ಇಲ್ಲವಾದಲ್ಲಿ ಹೆಸರು ಗಳಿಸಿರುತ್ತೇವೆ ಆದರೆ ಅದಕ್ಕಾಗಿ ಇನ್ನೊಬ್ಬರನ್ನು ಕೆಳಗೆ ತಳ್ಳಿರುತ್ತೇವೆ.
ಯಾಕೆಂದರೆ ಇಲ್ಲಿ ನಮಗೆ ಕೊನೆಯ ಹೆಜ್ಜೆಯರಿವು ಮಾತ್ರವೇ ಇರುತ್ತದೆ. ನೆನಪಿರಲಿ ಅರಿವೆಂಬುದು ನಿರಂತರವಾಗಿ ನಮ್ಮಲ್ಲಿರಬೇಕಾದ ಆಭರಣ!!
ಬೆವರಿನ ಹಸಿವು
ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು. ಎಂಬಂತೆ ನಾವು ಹಲವರನ್ನು ಕಾಣಬಹುದು ಪೂರ್ವಜರ ಆಸ್ತಿಯಲ್ಲಿ ತಿಂದು ತೇಗುವವರನ್ನು. ಹಾಗೂ ಅಂತಹವರು ಜೀವನದಲ್ಲಿ ತಾವಾಗಿಯೇ ಸಾಧಿಸುವುದಾದರೂ ಏನನ್ನು? ಕೆಲವರು ಇರುತ್ತಾರೆ
ಪೂರ್ವಜರ ಆಸ್ತಿಯೇ ಆದರೂ ಅಲ್ಲೂ ತಮ್ಮ ಶ್ರಮ ಹಾಕಿ ಕೆಲಸ ಮಾಡುತ್ತಾರೆ.ಆದರೆ ಉಳಿದವರು ಇರುವುದನ್ನೆಲ್ಲ ಮಾರಿ-ತೂರಿ ಪಟ್ಟಣದ ಹಾದಿಯ ಹಿಡಿಯುವವರು!! ಮನುಷ್ಯನಿಗೆ ಯಾವುದೇ ವಸ್ತುವಾದರೂ ಅದರ ಬೆಲೆ ಗೊತ್ತಿರಬೇಕು.ಇಲ್ಲವಾದಲ್ಲಿ ಅದರ ದುರ್ಬಳಕೆಯಾಗಿಬಿಡುತ್ತದೆ.
ಹಾಗೂ ಅಂತಹ ವಸ್ತುಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಿಸಲು ಶ್ರಮಿಸುವುದಿಲ್ಲ. ಯಾವುದನ್ನೇ ಆತ ಪಡೆಯಬೇಕಾದರೂ ಕೂಡ ಕಷ್ಟ ಪಟ್ಟೇ ಗಳಿಸಬೇಕು ಆಗ ಮಾತ್ರವೇ ಅದನ್ನು ಕಳೆದುಕೊಳ್ಳುವ ಭಯವಿರುತ್ತದೆ.
ಮನುಷ್ಯನಿಗೆ ಯಾವುದರ ಮೇಲೆ ಮೋಹವಿರಬೇಕೋ ಅದರ ಹೊರತಾಗಿ ಎಲ್ಲದರ ಮೇಲೂ ಮೋಹವಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ ಇಂದು.
ತನ್ನದಲ್ಲದರ ಮೇಲಿನ ಅತಿಯಾಸೆಯಿಂದಾಗಿ ತನ್ನದನ್ನೂ ಕೂಡ ಕಳೆದುಕೊಳ್ಳ ಹೊರಟಿದ್ದಾನೆ. ಯಾವುದೇ ಆದರೂ ಬಿಟ್ಟಿ ಸಿಕ್ಕರೆ ನೆಮ್ಮದಿ ಆತನಿಗೆ!!
ಸ್ವಾರ್ಥ:
ಸ್ವಾರ್ಥ ಎಂಬುದನ್ನು ನಾವು ಕೆಲವು ಬಾರಿ ಅಪಾರ್ಥ ಮಾಡಿಕೊಂಡುಬಿಡುತ್ತೇವೆ. ಹೆಚ್ಚು-ಹೆಚ್ಚು ಬೇಕೆಂದು ಕಷ್ಟಪಟ್ಟು ದುಡಿದರೆ ಅದು ಸ್ವಾರ್ಥವೂ ಅಲ್ಲ. ಹಾಗೂ ಮೋಹವೂ ಅಲ್ಲ. ನಮ್ಮ ಪ್ರತಿಯೊಂದು ಕರ್ಮಕ್ಕೂ ಫಲವನ್ನು ನಾವೇ ಅನುಭವಿಸಬೇಕಾಗಿರುವಾಗ ನಾವು ದುಡಿದದ್ದು. ನಮಗೆ ಸಿಗಬೇಕೆಂದು ಆಶಿಸುವುದರಲ್ಲಿ ಯಾವುದೇ ತಪ್ಪಿರುವುದಿಲ್ಲ.
ಎಷ್ಟೋ ಬಾರಿ ಸಾಲ ಪಡೆದವರು ಕೊಟ್ಟವರಿಗೆ ಬೈಯ್ಯುವುದುಂಟು. ಹಣವನ್ನು ವಾಪಾಸು ಕೇಳಿದಾಗ, ಆದರೆ ಆ ಹಣದ ಹಿಂದೆ ಅವರ ಶ್ರಮವಿರುವಾಗ ಅದರ ಮೇಲೆ ಅವರಿಗೆ ಪ್ರೀತಿ ಇರುವುದರಲ್ಲಿ ಯಾವ ತಪ್ಪಿರುತ್ತದೆ? ಕೇಳುವುದು ಮುಜುಗರವೆನಿಸಿದರೂ ಕೂಡ ಕರ್ಮ ಮಾಡಿರುವಾಗ ಫಲ ಸಿಗಲೇಬೇಕು ಹಾಗೂ ಸಿಗುವುದು ಕೂಡ!!
ಯಾರದ್ದೋ ಸಂಪತ್ತನ್ನು ನಮ್ಮದಾಗಬೇಕೆಂದು ಬಯಸುವುದು ಮಹಾನ್ ಅಪರಾಧ. ನಮ್ಮದೇ ನಮಗೆ ದಕ್ಕದಿರುವ ಕಾಲದಲ್ಲಿ ಇನ್ಯಾರದ್ದನ್ನೋ ಬಯಸಿದರೆ ದಕ್ಕಬೇಕಾದುದಾದರೂ ದಕ್ಕಲು ಸಾಧ್ಯವೇ? ಖಂಡಿತಾ ಇಲ್ಲ.
ಬೆವರಿನ ಹಸಿವಿರಬೇಕು:
ದುಡಿದೇ ತಿನ್ನುತ್ತೇನೆ ಎಂಬ ಛಲ-ಹಠವಿರಬೇಕು. ಹಾಗೂ ಈ ಎಲ್ಲವೂ ಯಾರಲ್ಲಿ ಇರುತ್ತದೆಯೋ ಅವರು ಕೆಟ್ಟವರ ಕಣ್ಣಲ್ಲಿ ಕೆಟ್ಟವರಾಗಿಯೇ ಕಾಣುತ್ತಾರೆ ಮತ್ತು ತಮ್ಮವರಿಂದಲೇ ದೂರಲ್ಪಡುತ್ತಾರೆ.
ದೂರಿದ ಮಾತ್ರವೇ ಇವರ ಶ್ರಮವೇನಾದರೂ ವ್ಯರ್ಥವಾಗುವುದೇ? ಅಥವಾ ದುಷ್ಕರ್ಮವಾಗುವುದೇ? ಇಲ್ಲವಲ್ಲ. ಕೌರವರು ದೂರಿದ ಮಾತ್ರಕ್ಕೆ ಶ್ರೀ ಕೃಷ್ಣನೇನು ಮೋಸಗಾರನಾಗಲಿಲ್ಲವಲ್ಲ.ಮತ್ತು ದೇವರಾಗಿಯೇ ಉಳಿದನು ಹಾಗೂ ಉಳಿದಿದ್ದಾನೆ ಕೂಡ.
ಅರ್ಥಾತ್ ಮಾರ್ಗ ಧರ್ಮದ್ದಾಗಿರುವಾಗ ಫಲ ಕಠಿಣವಾದರೂ ಚಿಂತೆ ಇಲ್ಲ ಆತ್ಮತೃಪ್ತಿಯಂತೂ ಖಂಡಿತಾ ದೊರೆಯುತ್ತದೆ ಹಾಗೂ ಸತ್ಫಲ ಕೂಡ ದೊರೆಯುವುದು ನಿಧಾನವಾದರೂ ಸರಿಯೇ!!
ಯಾರಿಗೆ ಬೆವರಿನ ಮೇಲೆ ನಂಬಿಕೆಯಿರುತ್ತದೆಯೋ ಆಗ ಆ ಬೆವರು ಕೂಡ ಸಿಹಿಯಾಗಿದೆಯೆಂದೇ ಅನಿಸುತ್ತದೆ. ಮತ್ತು ಅದು ಸಿಹಿಯಾದ ಫಲವನ್ನೇ ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ: Lessons by Krishna
ಇದನ್ನು ಓದಿ: Medicinal plants