Self Improvement Tips: ಹೊಟ್ಟೆಯೊಳಗೆ ಅವಿತು ಕುಳಿತ ಕೂಸು ಒಮ್ಮಿಂದೊಮ್ಮೆಲೆ ಹೊರ ಬಂದೀತೆ? ಇಲ್ಲವಲ್ಲ. ಹೀಗೆಯೇ ಯಾವುದೇ ಕೆಲಸ ನಡೆಯಬೇಕಾದರೂ ಅದಕ್ಕೆ ನಾವು ಕನಿಷ್ಠ ಸಮಯವನ್ನಾದರೂ ವಿನಿಯೋಗಿಸಬೇಕಾಗುತ್ತದೆ.

Self Improvement Tips:ಕೆಲವೊಮ್ಮೆ ಕಾಯಬೇಕಾಗುತ್ತದೆ:
ತತ್ ಕ್ಷಣಕ್ಕೆ ಆಗುವಂತದ್ದು ಸಾವು ಮಾತ್ರ. ಅದು ಕೂಡ ಕೆಲವೊಮ್ಮೆ ಕಾಡಿಸಿಬಿಡುತ್ತದೆ.
ಕೆಲಸವನ್ನು ಎಷ್ಟೇ ಬೇಗ ಮಾಡಿಮುಗಿಸಿಬಿಡಬಹುದು. ನಮಗೆ ಬೇಕಾದಂತೆ, ಬೇಕಾದ ಸಮಯಕ್ಕೆ..ಆದರೆ ಅದರಿಂದ ದೊರೆಯುವಂತಹ ಫಲಕ್ಕೆ ನಾವು ಕಾಯಲೇ ಬೇಕಾಗುತ್ತದೆ. ಆ ಕಾಯುವಿಕೆ ನಮ್ಮಿಂದ ಸಾಧ್ಯವಿಲ್ಲ, ಎನ್ನುವುದಾದರೆ ಅಷ್ಟು ಸಮಯ ಪ್ರಯತ್ನ ಹಾಗೂ ಶ್ರಮ ವ್ಯರ್ಥವಾಗಿಬಿಡುತ್ತದೆ.
ದುಃಖದ ಮುಂದಿನ ಸುಖಕ್ಕೂ, ಸುಖದ ಮುಂದಿನ ದುಃಖಕ್ಕೂ ಕೂಡ ಸಮಯ ಬರಬೇಕಾಗುತ್ತದೆ.ಮನುಷ್ಯನ ಕೈಯಲ್ಲೇ ಸಾಧ್ಯವಿರುವಂತಹ ಕೋರ್ಟಿನ ತೀರ್ಪಿಗೂ ಕೂಡ ಸಮಯ ಬರಬೇಕಾಗಿರುವಾಗ ದೇವರ ತೀರ್ಪಿಗೆ ಸಮಯದ ಅವಶ್ಯಕತೆ ಇರುವುದಿಲ್ಲವೇ? ದೇವರು ಪ್ರತಿಕ್ರಿಯಿಸದಿದ್ದಾಗ ಅಳುತ್ತಾ, ಬೇಡುತ್ತಾ, ಶಪಿಸುವ ನಾವುಗಳು ಕೋರ್ಟನ್ನು ಕಾನೂನನ್ನು ಯಾಕಾಗಿ ಶಪಿಸುವುದಿಲ್ಲ?.
ಕೋರ್ಟ್ ಗೆ ಸಮಯ ಬೇಕಾಗುತ್ತದೆ ಎಂದು ಮೊದಲೇ ತೀರ್ಮಾನಿಸಿಬಿಡುತ್ತೇವಲ್ಲ ನಮ್ಮಷ್ಟಕ್ಕೆ ನಾವೇ….
ಕೆಲವೊಮ್ಮೆ ಸಮಯಕ್ಕಾಗಿ ಕಾಯದೆ ನಮ್ಮನ್ನು ನಾವೇ ಗುಂಡಿ ತೋಡಿ ಆ ಗುಂಡಿಗೆ ಬೀಳಿಸಿಕೊಂಡು ಬಿಡುತ್ತೇವೆ. ಒಟ್ಟಾರೆಯಾಗಿ ನಮಗೆ ಅತಿ ಬೇಗನೆ ಫಲ ಬೇಕಷ್ಟೇ ಮತ್ತು ಇನ್ನೂ ಹಲವು ಬಾರಿ ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತೆ ಮಾಡಿಕೊಳ್ಳುತ್ತೇವೆ. ಅದು ಕೂಡ ‘ಆತುರಗೆಟ್ಟ ಆಂಜನೇಯನಂತೆ’ ಎನ್ನುತ್ತಾರಲ್ಲ ಹಾಗೆ!!
‘ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ’ ಆ ನಂತರ ಎಚ್ಚರವಾದರೆ ಸಿಗುವುದಾದರೂ ಏನಿದೆ? ಎಲ್ಲವನ್ನೂ ಕಳೆದುಕೊಂಡು ಬಿಟ್ಟಿರುತ್ತೇವಲ್ಲ. ಮೊದಲೇ ತಾಳ್ಮೆಯಿಂದ ವರ್ತಿಸಿದರೆ ಏನಾಗುತ್ತಿತ್ತು? ನಮ್ಮದನ್ನು ನಾವು ಉಳಿಸಿಕೊಳ್ಳಬಹುದಿತ್ತಲ್ಲವೇ?
ಎಲ್ಲವೂ ಕೂಡಲೇ ಆಗುವುದಾಗಿದ್ದರೆ ಮನುಷ್ಯ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಹುಟ್ಟಿದ ತಕ್ಷಣವೇ ಸಾಯುವುದಾಗಿದ್ದರೆ ಬದುಕು ಇರುತ್ತಿತ್ತೇ?
ಕೆಲಸಕ್ಕೆ ತಕ್ಷಣವೇ ಫಲ ಸಿಗುವುದಾಗಿದ್ದರೆ ಮನುಷ್ಯ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡುಬಿಡುತ್ತಿದ್ದ. ತಕ್ಷಣದ ಸುಖ ದೀರ್ಘಕಾಲ ಬಾಳುವುದಿಲ್ಲ. ಮತ್ತು ನಿಧಾನವಾಗಿ ದೊರೆತ ನೆಮ್ಮದಿ-ಸುಖ ಕೊನೆ ಕಾಲದವರೆಗೂ ನೆಲೆಸುತ್ತದೆ.ಕಾದು-ಕಾದು ದೊರೆತ ಫಲ ಬಹಳ ಸಿಹಿಯಂತೆ, ಆ ಸಿಹಿಯನ್ನು ಅನುಭವಿಸುವುದಕ್ಕೂ ಯೋಗ ಬೇಕು. ಬೇಕು ಎನ್ನುವುದಾದರೆ ಕಾಯಬೇಕು ಕಾಯಲು ತಾಳ್ಮೆ ಬೇಕು.
ಹಾಗೂ ಯಾರಲ್ಲಿ ತಾಳ್ಮೆ ಇರುವುದಿಲ್ಲವೋ ಅವರಲ್ಲಿ ಎಷ್ಟೇ ಹಣವಿದ್ದರೂ ಐಷಾರಾಮಿ ವಸ್ತುಗಳಿದ್ದರೂ ಅದೆಲ್ಲವೂ ವ್ಯರ್ಥವಲ್ಲವೇ? ಅಷ್ಟಕ್ಕೂ ತಾಳ್ಮೆ ಇರದವನು ಅಷ್ಟನ್ನೆಲ್ಲ ಗಳಿಸುತ್ತಾನೆ ಎನ್ನುವುದೇ ಅನುಮಾನವಲ್ಲವೇ?
ಹದಿನಾಲ್ಕು ವರ್ಷ ತಾಳ್ಮೆಯಿಂದ ಕಾದಿದ್ದಕ್ಕಲ್ಲವೇ ಸೀತೆ ರಾಮನನ್ನು ಸೇರಿದ್ದು? ವನವಾಸ ಹಾಗೂ ಅಜ್ಞಾತವಾಸವನ್ನು ತಾಳ್ಮೆಯಿಂದ ಸಹಿಸಿದ್ದಕ್ಕಾಗಿ ಅಲ್ಲವೇ ಆರ್ಯಾವರ್ತದಲ್ಲಿ ಪಾಂಡವರಿಂದ ಧರ್ಮದ ಸಂಸ್ಥಾಪಣೆಯಾಗಿದ್ದು? ಜನರು ತಾಳ್ಮೆಯಿಂದ ಅನೇಕ ವರ್ಷಗಳು ಕಾದಿದ್ದಕ್ಕಲ್ಲವೇ ಹಲವಾರು ಮಹತ್ವದ ತೀರ್ಪುಗಳು ಸುಪ್ರೀಂ ಕೋರ್ಟ್ ನಿಂದ ಹೊರಬಂದದ್ದು? ಒಂದು ವರ್ಷ ಸತತ ಕಷ್ಟಪಟ್ಟು ಕಾಯುದಕ್ಕಲ್ಲವೇ ಒಳ್ಳೆಯ ಫಸಲು ದೊರೆಯುವುದು?
Self Improvement Tips: ಯೋಚನೆಗಳು ಅತಿಯಾಗದಿರಲಿ:
ಜೀವನ ಎಂದಮೇಲೆ ಹಲವಾರು ಯೋಚನೆಗಳು ಪ್ರತಿನಿತ್ಯ ಪ್ರತಿಯೊಬ್ಬರಿಗೂ ಕಾಡುವುದುಂಟು. ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯೋಚಿಸಿಯೇ ಕೆಲಸ ಮಾಡುತ್ತೇವೆ.ಯೋಚಿಸುತ್ತಲೇ ಜೀವನ ಸಾಗಿಸುತ್ತೇವೆ.
ಕೆಲವು ಬಾರಿ ಅತಿಯಾದ ಯೋಚನೆಗೆ ಜಾರಿಬಿಡುತ್ತೇವೆ.ಜೊತೆ-ಜೊತೆಗೆ ಜೀವನ ಕೂಡ ಅದರೊಡನೆಯೇ ಜಾರಿಬಿಡಬಹುದು.
ಬದುಕಿನ ಆದಿಯಿಂದ ಅಂತ್ಯದವರೆಗೆ ಹಲವಾರು ತಿರುವುಗಳಲ್ಲಿ ನಾವು ತಿರುಗಬೇಕಿದೆ. ಸೋಲಬೇಕಿದೆ, ಗೆಲ್ಲಬೇಕಿದೆ,ಕೊನೆಗೆ ಅಸುನೀಗಲೂ ಬೇಕಿದೆ. ಅದರ ನಡುವೆ ನಮ್ಮದೇ ಒಂದಷ್ಟು ಗುರಿಗಳು ಅವುಗಳನ್ನು ತಲುಪಲು ಪಡಬೇಕಾದ ಕಷ್ಟಗಳು.
ಬರುವುದನ್ನು ಬರುವಂತೆ ಸ್ವೀಕರಿಸುತ್ತಾ ಹೋಗಬೇಕು. ಅದರ ಹೊರತಾಗಿ ನಾವೇನೇ ಮಾಡಿದರೂ ಅವೆಲ್ಲ ವ್ಯರ್ಥ ಪ್ರಯತ್ನಗಳಷ್ಟೇ.
ನಮ್ಮ ಸಮಾಧಾನಕ್ಕಾಗಿ ನಾವು ಹುಡುಕುವ ಮತ್ತು ಅದನ್ನೇ ವಾಸ್ತವವೆಂದು ತಿಳಿಯುವ ಮಾರ್ಗಗಳಷ್ಟೇ!!
ಕೇವಲ ಕಷ್ಟಗಳು ಬರುವುದಿಲ್ಲ. ಜೊತೆಗೆ ಹಲವಾರು ಯೋಚನೆಗಳನ್ನೂ ಕೂಡ ತಂದುಹಾಕುತ್ತವೆ. ಕಷ್ಟಗಳು ಸಮಯ ಕಳೆದಂತೆ ಸರಿಯಾಗಿಬಿಡಬಹುದು.
ಆದರೆ ಆ ತನಕ ನಮ್ಮನ್ನು ಕಿತ್ತುತಿಂದ ಯೋಚನೆಗಳು ಮಾತ್ರ ಅವುಗಳ ಪರಿಣಾಮವನ್ನು ನಮ್ಮ ಮೇಲೆ ಅದಾಗಲೇ ಬೀರಿಯಾಗಿರುತ್ತದೆ.
ಹಾಗೂ ಅವುಗಳು ನಮಗೆ ಒಳ್ಳೆಯ ಪಾಠಗಳನ್ನು ಕಲಿಸಬಹುದು. ಆದರೆ ಅದರಿಂದ ನಮಗೆ ಎದುರಾಗುವ ನೆಮ್ಮದಿಯ ಕೊರತೆ, ಆರೋಗ್ಯದ ಮೇಲಿನ ಹಾನಿ, ಇನ್ನಿತರ ಸಮಸ್ಯೆಗಳು ಬಹುಶಃ ನಮ್ಮ ಭವಿಷ್ಯದ ಮೇಲೆಯೂ ತನ್ನ ಪರಿಣಾಮವನ್ನು ಬೀರಬಹುದು.
ನಮ್ಮ ಕರ್ಮಗಳು ನಮ್ಮನ್ನು ಕಾಡಿಯೇ ಕಾಡುತ್ತವೆ. ಅದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಕೆಲವೊಂದು ಸಮಸ್ಯೆಗಳು ನಮ್ಮನ್ನು ಪರೀಕ್ಷಿಸಲೆಂದು ಬಂದಿರುತ್ತವೆ.
ಮತ್ತು ಅದರ ನಂತರ ಸಿಗುವ ಗೆಲುವುಗಳಿಗೆ ಅವು ನಮ್ಮನ್ನು ತಯಾರಾಗಿಸಿಬಿಡುತ್ತವೆ.
ನಮಗೆದುರಾಗುವ ಸಂಕಷ್ಟಗಳನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಸ್ವತಃ ನಮ್ಮಿಂದ ಹಾಗೂ ಭಗವಂತನಿಂದ ಕೂಡ!! ಕಷ್ಟಗಳೊಂದಿಗೆ ಬದುಕಬೇಕೆಂದೇನಿಲ್ಲ ಅವುಗಳನ್ನು ಪರಿಹರಿಸಲು ಪ್ರಯತ್ನ ಪಡಬೇಕು.
ಹಾಗೂ ಆಗ ಮಾತ್ರವೇ ಪ್ರಯತ್ನ ಫಲ ಕೊಡಲು ಸಾಧ್ಯ. ಅರ್ಥಾತ್ ಕಷ್ಟಗಳಿಂದ ದೂರಾಗಿ ಸುಖ ಪಡೆಯಲು ಸಾಧ್ಯವಾಗುವುದು.
ಕಷ್ಟಗಳನ್ನು ಪರಿಹರಿಸಲು ನಾವು ಯೋಚಿಸಲೇಬೇಕು. ಆದರೆ ಅದು ಎಂತಹ ಯೋಚನೆಯಾಗಿರಬೇಕು ಎಂಬುದು ಬಹಳ ಮುಖ್ಯವಾಗಿರುತ್ತದೆ.
ಕೆಲವು ಬಾರಿ ನಮ್ಮ ಯೋಚನೆಗಳು ಹೇಗಿರುತ್ತವೆಯೆಂದರೆ ನಮ್ಮನ್ನು ನಾವು ದೂಷಿಸಿಕೊಳ್ಳುವ ಹಾಗೆ ಮಾಡಿಬಿಡುತ್ತವೆ. ನಾವು ತೀರಾ ಯಾರನ್ನು ಪ್ರೀತಿಸುತ್ತೇವೆಯೋ ಅವರ ಮೇಲೆ ಅನುಮಾನವುಂಟಾಗುವ ಹಾಗೆ ಮಾಡುತ್ತವೆ.
ಹಾಗೂ ಸ್ವತಃ ನಾವು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಂಡು ಬಿಡುತ್ತೇವೆ. ಪ್ರತಿಯೊಂದು ಕೂಡ ನಾಟಕೀಯವಾಗಿಯೇ ಕಾಣಲಾರಂಭಿಸುತ್ತದೆ. ಇಂತಹ ಯೋಚನೆಗಳನ್ನೂ ಕೇವಲ ನಮ್ಮ ನೆಮ್ಮದಿ ಹಾಗೂ ಆರೋಗ್ಯವನ್ನು ಹಾಳುಮಾಡುವುದಿಲ್ಲ.
ಅದರೊಡನೆ ನಮ್ಮ ಹಾಗೂ ಇತರರ ನಡುವಿನ ಮತ್ತು ಸಮಾಜದ ನಡುವಿನ ಸಂಬಂಧವನ್ನು ಹಾಳುಗೆಡುವುತ್ತದೆ. ಯಾವುದಾದರೂ ಕೂಡ ಅತಿಯಾದರೆ ವಿಷವಾಗಿ ಪರಿಣಮಿಸುತ್ತದೆ.
ಯೋಚನೆ ಕೂಡ ಅಷ್ಟೇ!! ಕಷ್ಟಗಳಿವೆಯೆಂದು ಆಳವಾಗಿ ಯೋಚಿಸಲು ಆರಂಭಿಸಿದರೇ ಆ ಯೋಚನೆಗಳು ಕಷ್ಟಗಳಿಗಿಂತಲೂ ಹೆಚ್ಚಿನ ಕಷ್ಟವಾಗಿಬಿಡುತ್ತವೆ.
ಎಲ್ಲವೂ ನಿರಂತರ :
ಜನನ ಹಾಗೂ ಮರಣದ ಕ್ಷಣಗಳು ನಮಗೆ ಇಳಿಯದಂತೆ ಬಂದುಬಿಡುವುವು.ಯಾವುದೇ ಕ್ಷಣ ಕೂಡ ನಮ್ಮ ಅವಸಾನವಾಗಬಹುದು.
ಈ ಮಧ್ಯೆ ಕೆಲವು ಬಾರಿ ಸುಖ ಹಲವು ಬಾರಿ ದುಃಖ, ಕೆಲವೊಮ್ಮೆ ದಿನ ಕಳೆದಿದ್ದೆ ತಿಳಿಯೋದಿಲ್ಲ ಆದ್ರೆ ಇನ್ನೂ ಕೆಲವು ದಿನ ಕಳಿಯೋಕೆ ಆಗೋದೆ ಇಲ್ಲ.
ಜೀವನದಲ್ಲಿ ಏನೇ ಆಗಬಹುದು ಅದಕ್ಕೆಲ್ಲ ಕಾರಣ ಒಂದಲ್ಲ ಒಂದು ರೀತಿಯಲ್ಲಿ ನಾವೇ ಆಗಿರ್ತೀವಿ. ನಮಗೆ ಏನಾದರೂ ಸಿಕ್ಕರೆ ನಮ್ಮ ಪ್ರಯತ್ನ ನೋಡಿ ಭಗವಂತ ಕೊಟ್ಟ ಫಲ ಅದಾಗಿರುತ್ತೆ.
ಇನ್ನೂ ಏನಾದ್ರು ಸಿಗದೆ ಇದ್ರೆ ಅಥವಾ ಅರ್ಧದಲ್ಲೇ ನಮ್ಮಿಂದ ದೂರಾದ್ರೆ ಅದು ನಮಗೆ ಭಗವಂತ ಕಲಿಸೋ ಪಾಠ ಆಗಿರುತ್ತೆ. ಹಾಗೂ ಅದರ ನಂತರದ ನಮ್ಮ ಬದುಕನ್ನ ಕೂಡ ಆತನೇ ನಿರ್ಧಾರ ಮಾಡುತ್ತಾನೆ.
ಏನಾದರೊಂದನ್ನು ಪಡೆಯಬೇಕಾದರೆ ಯಾವುದಾದರೊಂದನ್ನು ಕಳೆದುಕೊಳ್ಳಲೇ ಬೇಕು ಇದು ಜಗದ ನಿಯಮ. ಹಾಗಾಗಿಯೇ ಎಲ್ಲರ ಬಳಿ ಎಲ್ಲವೂ ಇರಲು ಸಾಧ್ಯವಿಲ್ಲ ಇಲ್ಲಿ!!
ನನ್ನ ಬಳಿ ಹಣವಿಲ್ಲ ಎಂದ ಮಾತ್ರಕ್ಕೆ ನಾನು ಬಡವನಾಗಲಾರೆ. ಯಾಕೆಂದರೆ ಗುಣವನ್ನು ಅಪೇಕ್ಷಿಸುವವರು ಕೂಡ ಇರುತ್ತಾರೆ ಪ್ರಪಂಚದಲ್ಲಿ. ಆದರೆ ಈ ಎಲ್ಲ ಗೊಂದಲಗಳ ಬದುಕುವುದು ಒಂದು ದೊಡ್ಡ ಸಾಹಸವೇ ಸರಿ.
ಆದುದಕ್ಕೆಲ್ಲಾ ಹೂ ಗುಟ್ಟುತ್ತಾ ಮುಂದೆ ಸಾಗುವುದು ಸಣ್ಣ ವಿಷಯವೇನಲ್ಲ ನಾವುಗಳು ಭಾವನಾತ್ಮಕ ಜೀವಿಗಳಾಗಿರುವಾಗ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲು ಅಥವಾ ಸಾವನ್ನೇ ಅರಸಿ ಹೋಗುವುದು ಕೂಡ ನ್ಯಾಯವಲ್ಲ.
ಎಲ್ಲವನ್ನೂ ಕೂಡ ಸಮವಾಗಿ ಸ್ವೀಕರಿಸಬೇಕು. ಎಲ್ಲಾ ಬೆರಳುಗಳು ಸಮವಾಗಿರಲಾರವು. ಆದ್ದರಿಂದ ನಾವು ಮಾಡೋ ಕೆಲಸಗಳು ಸಮವಾಗಿ ಪ್ರತಿಫಲ ನೀಡಲಾರವು.
ಹಾಗೆಂದು ನಾವು ಆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದಲ್ಲಿ ಹೇಡಿಯೆಂದು ಯಾರೂ ಹೇಳದಿದ್ದರೂ ನಮ್ಮಲ್ಲೇ ಆ ಭಾವ ಅಳುಕಾಗಿ ಉಳಿದುಬಿಡುತ್ತದೆ.
ಹಾಗೂ ಆ ಅಳುಕು ಜೀವನದ ಸರಾಗ ಮಾರ್ಗವನ್ನು ಕಠಿಣವಾಗಿಸಿಬಿಡುತ್ತದೆ. ಇದರಿಂದಾಗಿ ನಿಂತ ನೀರಾಗಿಬಿಡುತ್ತೇವೆ ನಾವು.
ಕೆಲವರಿಗೆ ಸೋಲೆಂಬ ಭಯ ಸಾಹಸಕ್ಕೆ ಇಳಿಯುವ ಮುನ್ನವೇ ಬಂದರೆ ಇನ್ನೂ ಕೆಲವರಿಗೆ ಫಲಿತಾಂಶದ ನಂತರ ಬರುತ್ತದೆ.
ಮೊದಲೇ ಬಂದಲ್ಲಿ ಯಾವುದಕ್ಕೂ ಮುಂದೆ ಹೋಗದೆ ಹಿಂದೆಯೇ ಉಳಿದುಬಿಡುತ್ತಾನೆ, ನಂತರ ಬಂದಲ್ಲಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇಲ್ಲವೇ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ.
ಹಾಗಾದ್ರೆ ಆ ಕೆಲಸಗಳಲ್ಲಿ ಕೇವಲ ಸೋಲುಂಡವ ಮಾತ್ರವೇ ಪಾತ್ರ ವಹಿಸಿರುತ್ತಾನೆಯೇ? ಇಲ್ಲವಲ್ಲ. ಗೆದ್ದಿರುವವನು ಸುಖಾಸುಮ್ಮನೆ ಗೆದ್ದಿರುವುದಿಲ್ಲ. ಅದರ ಹಿಂದೆ ಅವನ ಸತತ ಶ್ರಮವಿರುತ್ತದೆ, ನಿದ್ರಾರಹಿತ ರಾತ್ರಿಗಳಿರುತ್ತವೆ.
ಹೀಗಿರುವಾಗ ಆತನಿಗೆ ಗೆಲುವು ಸಿಕ್ಕಿದ್ದು ನ್ಯಾಯವಲ್ಲವೇ? ಒಂದು ವೇಳೆ ಆತ ಅನ್ಯಾಯದ ಮಾರ್ಗದಿಂದ ಗೆಲುವನ್ನು ಪಡೆದಿದ್ದರೆ ಅದಕ್ಕೆ ತಕ್ಕ ಪ್ರತಿಫಲ ಆತನಿಗೆ ದೊರಕೆ ದೊರಕುತ್ತದೆ.
ಹೀಗಿರುವಾಗ ನಮ್ಮ ಸೋಲು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ನಮ್ಮಲ್ಲಿರುವ ಉತ್ಸಾಹದ ನಿರಂತರತೆಯನ್ನು ಕಾಪಾಡಬೇಕೆ ಹೊರತು ನಮ್ಮನ್ನು ಜೀವಂತ ಶವವಾಗಿಸಬಾರದು.
‘ಆದುದೆಲ್ಲ ಒಳ್ಳೆಯದಕ್ಕೇ ಹಾಗೂ ಆಗುವುದು ಕೂಡ ಒಳ್ಳೆಯದಕ್ಕೇ’ ಎಂದು ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ನುಡಿದಿದ್ದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಲೇ ಬೇಕು.
ಅಳವಡಿಸಿಕೊಂಡಿದ್ದೆ ಆದಲ್ಲಿ ನಾವು ನಮ್ಮ ಯಾವುದೇ ಸೋಲುಗಳಿಗೆ ಅಂಜುವುದಿಲ್ಲ. ಮತ್ತು ನಿರಂತರ ಪ್ರಯತ್ನ ನಮಗೆ ಬೆಸರವುಂಟು ಮಾಡುವುದಿಲ್ಲ. ಹಾಗೂ ಗೆಲುವು ನಮ್ಮಲ್ಲಿ ಅಹಂ ಭಾವವನ್ನು ಕೂಡ ಹುಟ್ಟಲು ಬಿಡುವುದಿಲ್ಲ. ಹೀಗಿದ್ದಾಗ ನಾವು ಮಗುವಿನಂತೆ ಬದುಕಲು ಸಾಧ್ಯವಾಗುವುದು.
ಹಾಗೂ ಮಗುವಿಗೆ ಜೀವನ ನಿರಂತರವಾಗಿ ಸಾಗುತ್ತದೆ. ಎಂದು ಗೊತ್ತಿರುತ್ತದೆಯೇ ವಿನಾ ಸೋಲು-ಗೆಲುವುಗಳ ಅರಿವಿರುವುದಿಲ್ಲ!!
ಅಗತ್ಯಗಳು:
ಅಗತ್ಯಗಳಿರದ ಜೀವನವೇ ಇಲ್ಲ. ಪ್ರತಿಯೊಬ್ಬರಿಗೂ ಪ್ರತಿಯೊಂದು ಕ್ಷಣವೂ ಒಂದೊಂದರ ಅಗತ್ಯ ಬೀಳುತ್ತದೆ. ಆ ಅಗತ್ಯಗಳು ಪೂರ್ಣವಾಗದಲ್ಲಿ ಮುಂದಿನ ನಡೆಯನ್ನು ನಡೆಯಲು ಸಾಧ್ಯವಾಗುವುದಿಲ್ಲ.
ಒಂದಷ್ಟು ವಸ್ತುಗಳ ಅಗತ್ಯತೆ ಬರುವುದು ಒಂದೆಡೆಯಾದರೆ ಒಂದಷ್ಟು ಮನಸ್ಸುಗಳ ಅಗತ್ಯತೆಯೂ ಕೂಡ ಬರುವುದುಂಟು. ಅಗತ್ಯದ ನಂತರ ವಸ್ತುಗಳನ್ನು ಮರೆತುಬಿಡುತ್ತೇವೆ. ಅಥವಾ ಎಸೆದು ಬಿಡುತ್ತೇವೆ.
ಆದರೆ ಮನಸ್ಸುಗಳು ಅರ್ಥಾತ್ ಮನುಷ್ಯರನ್ನು ಹಾಗೆ ತಳ್ಳಿಬಿಡಲು ಸಾಧ್ಯವೇ? ಆಧುನಿಕತೆಗೆ ಬಂದಂತೆ ಮನುಷ್ಯ ತನ್ನನ್ನು ತಾನೇ ಮರೆಯುತ್ತಿರುವಾಗ ಬೇರೆಯವರ ನೆನಪಾದರೂ ಹೇಗೆ ಇದ್ದೀತು ಎಂದೆನಿಸಬಹುದು.
ಆದರೆ ಹಿಂದೆ ಗುರು ಮುಂದೆ ಗುರಿಯನ್ನಿಟ್ಟುಕೊಂಡು ಸಾಗಿ ಗುರಿ ತಲುಪಿದ ನಂತರ ಗುರುವನ್ನೇ ಮರೆತುಬಿಟ್ಟರೆ ಸಾಧನೆ ಅನರ್ಥವಾಗಿಬಿಡುತ್ತದೆ.
ಹಾಗೂ ಅಂತಹ ಸಾಧನೆಯಿಂದಾಗಿ ಯಾರೊಬ್ಬರಿಗೂ ಏನೂ ದೊರೆಯುದಿಲ್ಲ. ಆತ್ಮತೃಪ್ತಿಯೂ ಕೂಡ!!
ಮನುಷ್ಯ ಎನ್ನುವವನು ಎಷ್ಟು ಸಂಘ ಜೀವಿಯೂ ಅದಕ್ಕಿಂತಲೂ ಹೆಚ್ಚಾಗಿ ಆತ ಸ್ವಾರ್ಥ ಜೀವಿಯಾಗಿದ್ದಾನೆ. ತನಗಾಗಿ ಮಾತ್ರವೇ ದುಡಿಯುವ ಆತ, ಬೇರೆಯವರ ಏಳಿಗೆಯನ್ನು ಸಹಿಸದೇ ‘ಬದುಕು ಬದುಕಲು ಬಿಡು’ ಎಂಬ ಮಾತಿನಲ್ಲಿ ಕೇವಲ ‘ಬದುಕು’ ಎಂಬುದನ್ನು ಮಾತ್ರವೇ ಅರ್ಥೈಸಿಕೊಂಡಂತಿದೆ.
ಆದರೆ ನಮ್ಮ ಕರ್ಮದಿಂದಲೇ ನಮ್ಮ ಮುಂದಿನ ಕ್ಷಣಗಳು ನಿರ್ಧಾರವಾಗುವುದು. ಇದುವೇ ಜಗದ ನಿಯಮ.
ಇನ್ಯಾರೋ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಪಶುವಾಗಿಸಬಹುದು. ಮತ್ತಿನ್ಯಾರೋ ಅವರನ್ನು ಮೂಲೆ ಗುಂಪಾಗಿಸಬಹುದು. ಹೀಗೆ ಈ ಸರಪಳಿ ಮುಂದುವರೆಯುತ್ತಾ ಹೋಗುತ್ತದೆ.
ಬಹುಶಃ ಈ ಅಗತ್ಯ ಎಂಬ ಕಾರಣಕ್ಕಾಗಿಯೇ ಆಧುನಿಕರು ಪ್ರೀತಿಯನ್ನು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಒಂದಷ್ಟು ಕಾಲ ಒಟ್ಟಿಗಿದ್ದು ಬೇಡವೆನಿಸಿದಾಗ ದೂರ ಸರಿದು.
ಪ್ರೀತಿಯೆಂದರೆ ವ್ಯವಹಾರ ಅಥವಾ ಅದೊಂದು ಕೆಟ್ಟ ಚಾಳಿ ಎಂಬುದಾಗಿ ಹೊರ ಜಗತ್ತಿಗೆ ತೋರಿಸಿಕೊಡುತ್ತಿದ್ದಾರೆ.
ಪ್ರೀತಿ-ಪ್ರೇಮವಷ್ಟೇ ಅಲ್ಲ, ಎಲ್ಲಾ ರೀತಿಯ ಸಂಬಂಧಗಳು ಮುಗಿದುಹೋಗುವುದು ಅಗತ್ಯ ಮುಗಿದಾಗ ಮಾತ್ರವೇ!!
ಜೀವನದ ಪ್ರತೀ ಕ್ಷಣಗಳನ್ನೂ ನೆನಪಿನಲ್ಲಿಡಬೇಕು. ಎಷ್ಟೋ ಜನರು ಬರುವುದುಂಟು. ಎಷ್ಟೋ ಜನರು ಹೋಗುವುದುಂಟು, ಎಷ್ಟೋ ಪಾಠ ಕಲಿಯುವುದುಂಟು, ಕೆಲವರಿಂದ ನಾವೇ ದೂರಾದರೆ, ಇನ್ನೂ ಕೆಲವರು ತಾವಾಗಿಯೇ ದೂರಾಗುತ್ತಾರೆ. ಆದರೆ ಪ್ರತಿಯೊಬ್ಬರ ಪಾತ್ರವೂ ಬಹುಮುಖ್ಯ.
ಒಂದೊಂದು ಪಾತ್ರದಿಂದಲೂ ಒಂದೊಂದು ಪಾಠ ಕಲಿತಿರುತ್ತೇವೆ ನಾವು. ಆದರೆ ಅಗತ್ಯ ಎನ್ನುವುದು ಎಲ್ಲರನ್ನು ದೂರಾಗಿಸಿಬಿಡುತ್ತದೆ.
ಅಗತ್ಯಗಳಿಗಾಗಿ ಸಂಬಂಧ ಬೆಸೆಯುವುದಾದರೆ ಸಂಬಂಧಗಳಿಗೆ ಅರ್ಥವೇ ಇಲ್ಲವೇ? ಪ್ರೀತಿ-ವಾತ್ಸಲ್ಯಗಳು ಹೆಸರಿಗೆ ಮಾತ್ರವೇ?
ಹುಟ್ಟಿದಾಗಿನಿಂದ ಉತ್ತಮ ನೌಕರಿ ಹಿಡಿಯುವ ತನಕ ಜೊತೆಗಿದ್ದ ತಂದೆ-ತಾಯಂದಿರು ಆನಂತರ ವೃದ್ಧಾಶ್ರಮ ಸೇರಿಬಿಡುತ್ತಾರೆ.
ಒಳ್ಳೆಯ ಸ್ಥಾನ-ಮಾನ ಸಿಕ್ಕಾಗ ಹಿಂದಿನ ಕಷ್ಟಗಳು-ಕಷ್ಟಗಳಿಗೆ ನೆರವಾದವರು ಕೀಳೆನಿಸಿಬಿಡುತ್ತಾರೆ. ಹೆಂಡತಿ ಬಂದ ನಂತರ ತಾಯಿ ಭಾರವಾಗಿಬಿಡುತ್ತಾಳೆ.
ಹೊಸ ಸ್ನೇಹಿ ಅಥವಾ ಪ್ರೇಮಿ ಸಿಕ್ಕಾಗ ಅಷ್ಟು ದಿನ ಬೆಂಗಾವಲಾಗಿದ್ದ ಪ್ರೀತಿ-ಸ್ನೇಹ ಕಿರಿ-ಕಿರಿಯೆನಿಸುತ್ತದೆ…. ಹೀಗೆ ಹೊಸತು ಹಳತನ್ನು ಮರೆಸಿಬಿಡುತ್ತದೆ. ದುಡ್ಡು ಸಿಕ್ಕಾಗ ಪಟ್ಟ ಕಷ್ಟ ಮರೆತು ಸಿಕ್ಕ-ಸಿಕ್ಕಂತೆ ಹಣವನ್ನು ಉಡಾಯಿಸಿದಂತೆ!!
ಯಾರಿಂದಲೂ ಕಿತ್ತುಕೊಳ್ಳಲಾಗುವುದಿಲ್ಲ!!:
ಹುಟ್ಟು-ಸಾವು ಎಂಬುದು ದೈವ ನಿಶ್ಚಿತ, ಪ್ರಕೃತಿ ನಿಶ್ಚಿತ ಯಾರಿಂದಲೂ ಏನನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಆ ಎರಡರ ನಡುವಿನ ದಿನಗಳು ನಮ್ಮವೇ ಆಗಿವೆ. ಆ ದಿನಗಳನ್ನು ನಾವು ನಮಗೆ ಬೇಕಾದಂತೆ ಬದಲಾಯಿಸಬಹುದು.
ನಮ್ಮ ದಿನಗಳು ಅಥವಾ ನಮ್ಮ ಜೀವನ ನಮ್ಮ ಯೋಚನೆಗಳಿಗೆ ತಕ್ಕಂತೆ ಬದಲಾಗುವಂತವುಗಳು.
ಇರೋ ಮೂರು ದಿನದ ಬದುಕಲ್ಲಿ ಹೇಗೆ ಬದುಕುತ್ತೇವೆ, ಎಂಬುದು ನಮಗಿಂತಲೂ ಹೆಚ್ಚಾಗಿ ನಮ್ಮ ಸಮಾಜಕ್ಕೆ ಮುಖ್ಯವಾಗಿರುತ್ತದೆ ಎಂಬುದು ವಾಸ್ತವ.
ಆದರೆ ಸಮಾಜಕ್ಕಾಗಿ ನಾವೆಷ್ಟು ಬದುಕುತ್ತೇವೆಯೋ ಅದಕ್ಕೂ ದುಪ್ಪಟ್ಟು ನಮಗಾಗಿ ನಾವು ಬದುಕಬೇಕು.
ಆದರೆ ನಮ್ಮ ಜೀವನದ ಕೊನೆಯಲ್ಲಿ ನಾವೇನನ್ನು ಸಂಪಾದಿಸಿದ್ದೇವೆ? ಈ ಪ್ರಶ್ನೆಯನ್ನು ನಾವು ಆದಷ್ಟು ಮೊದಲೇ ಕೇಳಿಕೊಳ್ಳಬೇಕು. ಆಗಲೇ ಯಾವುದನ್ನೇ ಆಗಲಿ ಗಳಿಸಲು ಸಾಧ್ಯವಾಗುತ್ತದೆ.
ಹಣವನ್ನು ಎಲ್ಲರೂ ಗಳಿಸುತ್ತಾರೆ. ಯಾರದ್ದನ್ನೋ ಖಬಳಿಸಿಯೋ ಅಥವಾ ತಾವೇ ಕಷ್ಟ ಪಟ್ಟೋ ಎಲ್ಲರೂ ಆಸ್ತಿ ಮಾಡುತ್ತಾರೆ.
ಈ ಎರಡನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ನಮ್ಮ ನಂತರ ಅದು ಮಣ್ಣು ಪಾಲಾಗುತ್ತದೆ. ಅಥವಾ ಯಾರದ್ದೋ ಕೈ ಸೇರುತ್ತದೆ ಅಥವಾ ನಮ್ಮ ಸಂತಾನಕ್ಕೆ ಸಿಗುತ್ತದೆ.
ಹಾಗಾದರೆ ಜೀವನದ ಅತಿ ಅಮೂಲ್ಯ ಸಮಯವನ್ನು ಅವುಗಳ ಸಂಪಾದನೆಗಾಗಿ ಇಟ್ಟಿದ್ದು ವ್ಯರ್ಥವಾಗುವು ದಿಲ್ಲವೇ? ಅವುಗಳನ್ನು ನಾವು ನಮ್ಮೊಂದಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆಯೇ?
ಸಾವಿನ ನಂತರ ಅದನ್ನು ಅನುಭವಿಸಲು ಸಾಧ್ಯವಾಗುತ್ತದೆಯೇ? ಇದ್ಯಾವುದೂ ಸಾಧ್ಯವಿಲ್ಲ ಎಂದಾದಮೇಲೆ ಅದಕ್ಕಾಗಿ ಅಷ್ಟೊಂದು ಹಪಹಪಿಸಬೇಕೇಕೆ?
ಹೌದು! ಬದುಕಲು ಹಣ ಖಂಡಿತವಾಗಿಯೂ ಬೇಕು. ಆದರೆ ಎಷ್ಟು ಬೇಕು ಎಂಬುದು ಮುಖ್ಯವಾಗುತ್ತದೆ. ಯಾವುದಾದರೂ ಅಷ್ಟೇ ಇತಿ-ಮಿತಿಯಲ್ಲಿದ್ದರೆ ಬಹುಚೆನ್ನ, ಅತಿಯಾದಲ್ಲಿ ವಿಷವಾಗಿಬಿಡುತ್ತದೆ.
ಆದರೆ ಅತಿಯಾದರೂ ಕೂಡ ವಿಷವಾಗದೇ ಇರುವಂತಹ ಕೆಲವು ಅಂಶಗಳು ಲೌಖಿಕ ಜೀವನದಲ್ಲಿ ಸಿಗುತ್ತದೆ ಎಂದಾದರೆ ಅದನ್ನು ನಾವು ಗಳಿಸಬಾರದೇಕೆ? ಕನಿಷ್ಠ ಪಕ್ಷ ಪ್ರಯತ್ನವಾದರೂ ಮಾಡಬಹುದಲ್ಲವೇ?
ನಾವು ಮಾಡುವ ಕರ್ಮಗಳ ಫಲಗಳು ನಮಗೆ ಎದುರಾಗುವುದನ್ನು ಯಾರಿಂದಲಾದರೂ ತಪ್ಪಿಸಲು ಸಾಧ್ಯವಾಗುತ್ತದೆಯೇ? ಇಲ್ಲ. ಅದು ಸತ್ಕರ್ಮ ಅಥವಾ ದುಷ್ಕರ್ಮ ಯಾವುದೇ ಅದರ ಫಲ ನಮ್ಮ ಹಿಂದೆ ಬಂದೇ ಬರುತ್ತದೆ.
ಸತ್ಕರ್ಮಗಳು ನಮ್ಮದಾದಾಗ ನಮ್ಮ ನಂತರವೂ ಅವು ಅನೇಕರಿಗೆ ಅದರ್ಶವಾಗುವುವು. ಕೇವಲ ನಮ್ಮಿಂದ ಯಾರೂ ಅವುಗಳನ್ನು ಕಿತ್ತುಕೊಳ್ಳಲಾಗುವುದಿಲ್ಲ. ಎನ್ನುವುದಕ್ಕಿಂತ ಅವುಗಳು ನಾಲ್ಕು ಜನರಿಗೆ ಸ್ಫೂರ್ತಿಯನ್ನುಂಟು ಮಾಡಬೇಕು. ಅದುವೇ ನಾವು ನಿಜವಾಗಿಯೂ ಗಳಿಸುವ ಶಾಶ್ವತ ವಸ್ತು!
ಕೇವಲ ಕರ್ಮವೊಂದಲ್ಲ ನಮ್ಮೊಳಗಿನ ಆತ್ಮವಿಶ್ವಾಸ, ಕರುಣಾಗುಣ, ವಿದ್ಯೆ, ಇನ್ನಿತರ ಎಲ್ಲಾ ಧನಾತ್ಮಕ ಗುಣಗಳನ್ನು ನಾವು ಧೃಢವಾಗಿ ಮನಸ್ಸು ಮಾಡಿದಲ್ಲಿ ನಮ್ಮಿಂದ ಅವುಗಳನ್ನು ಯಾರೂ ಕೂಡ ಕಿತ್ತುಕೊಳ್ಳಲಾಗುವುದಿಲ್ಲ.
ನಾವು ಮತ್ತು ನಮ್ಮ ಮನಸ್ಸು ನಮ್ಮದೇ ಹಿಡಿತದಲ್ಲಿರಬೇಕು. ಹಾಗೂ ಹೀಗಿರುವಾಗ ನಮ್ಮ ಹಿಡಿತದ ಚಕ್ರವ್ಯೂಹವನ್ನು ಯಾರಿಂದಲಾದರೂ ಭೇಧಿಸಲು ಸಾಧ್ಯವಾದೀತೇ?
ಜಗತ್ತೇ ಒಂದು ನಶ್ವರ, ಇಲ್ಲಿ ಶಾಶ್ವತವಾದುದು ಆತ್ಮವೊಂದೇ ಹಾಗೂ ಅದರ ಮೂಲಕ ಶುದ್ಧ ಮನಸ್ಸಿನಿಂದ ಮಾಡುವ ಮತ್ತು ಕಲಿತ ಎಲ್ಲವೂ ಶಾಶ್ವತವೇ ಆಗಿರುತ್ತವೆ. ನಾವಿದ್ದಾಗಲೂ ಮತ್ತು ನಾವಿಲ್ಲದಿರುವಾಗಲೂ…
ಹೆಚ್ಚಿನ ಮಾಹಿತಿಗಾಗಿ: lessons by lord Krishna
ಇದನ್ನೂ ಓದಿ: Healthy Heart