Chikkamagaluru: 40 ಅಡಿ ಆಳದ ಕಂದಕಕ್ಕೆ ಬಿದ್ದ ಪ್ರವಾಸಿ ಜೀಪ್; ಮೂವರು ಪಾರು

Chikkamagaluru: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯನ್ನು ನೋಡಲು ತೆರಳಿದ ಪ್ರವಾಸಿಗರಿದ್ದ ಜೀಪ್‌ವೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಪ್ರವಾಸಿಗರು ಜರಿ ಜಲಪಾತ ವೀಕ್ಷಣೆಗೆಂದು ತೆರಳಿದ್ದ ಸಂದರ್ಭದಲ್ಲಿ ಸುಮಾರು 40 ಅಡಿ ಆಳದ ಕಂದಕಕ್ಕೆ ಜೀಪ್ ಬಿದ್ದಿದೆ.
ಪ್ರವಾಸಿಗರು ಕೇರಳ ಮೂಲದವರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಜೀಪ್ ಕಂದಕಕ್ಕೆ ಉರುಳಿದ್ದು, ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಜೀಪ್ ಚಾಲಕ ಸೇರಿದಂತೆ ಮೂವರು ಪ್ರವಾಸಿಗರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜೀಪ್ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.